Thursday, 12th December 2024

ಆಡಳಿತಕ್ಕೆ ಈಗ ವೇಗ ಸಿಗಲಿ

ರಾಜ್ಯದಲ್ಲಿ ಕಳೆದ ಎರಡು ತಿಂಗಳಿನಿಂದ ರಾಜಕೀಯ ಅಸ್ಥಿರತೆಯಿಂದ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ. ಮುಖ್ಯಮಂತ್ರಿಗಳ ಬದಲಾವಣೆ, ಮುಖ್ಯಮಂತ್ರಿ ಅಧಿಕಾರ ಸ್ವೀಕಾರ ಎನ್ನುವ ವಿಷಯದಲ್ಲಿ ಆಡಳಿತಾತ್ಮಕ ವಿಷಯಗಳು ಸಂಪೂರ್ಣ ಕುಂಠಿತವಾಗಿವೆ. ಅಧಕಾರಿ ವರ್ಗ ಇದ್ದರೂ, ಮುಖ್ಯಮಂತ್ರಿ ಇಲ್ಲದೇ, ಸಚಿವರಿಲ್ಲದೇ ಯಾವುದೇ ಕೆಲಸಗಳು ಪೂರ್ಣ ಪ್ರಮಾಣದಲ್ಲಿ ಆಗುವುದಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.

ಕರೋನಾ ಮೂರನೇ ಅಲೆ, ಪ್ರವಾಹ ಸೇರಿದಂತೆ ಸಾಲು ಸಾಲು ಸವಾಲಿರುವ ಈ ಸಮಯದಲ್ಲಿ ಬಸವರಾಜ ಬೊಮ್ಮಾಯಿ ಅವರ ಸಂಪುಟ ರಚನೆಯಾಗಿದ್ದು, ನಿರೀಕ್ಷೆಗಿಂತ ಹೆಚ್ಚು ಜನರು ಸಚಿವರಾಗಿ ಅಧಿಕಾರ ಸ್ವೀಕರಿಸಿ ದ್ದಾರೆ. ಇದೀಗ ಖಾತೆ ಹಂಚಿಕೆ, ಜಿಲ್ಲಾ ಉಸ್ತುವಾರಿ ನೇಮಕವೂ ಪೂರ್ಣಗೊಳ್ಳಲಿದೆ. ಸಂಕಷ್ಟ ಪರಿಸ್ಥಿತಿಯಲ್ಲಿ ರುವ ಈ ಸಮಯದಲ್ಲಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಹೊಂದಿಕೊಳ್ಳಲು ಎಂದು ಕೆಲ ಸಮಯ ತಗೆದುಕೊಳ್ಳದೆ ಜನರ ಆಶೋತ್ತರಗಳಿಗೆ ಕೆಲಸ ಮಾಡುವ ಕಾರ್ಯವನ್ನು ಆರಂಭಿಸಬೇಕು.

ಸಂಪುಟದಲ್ಲಿರುವ ಶೇ.50ಕ್ಕೂ ಹೆಚ್ಚು ಮಂದಿ ಯಡಿಯೂರಪ್ಪ ಅವರ ಸರಕಾರದಲ್ಲಿ ಸಚಿವರಾಗಿ ಕೆಲಸ ಮಾಡಿರುವ ಅನುಭವ ಇರುವುದರಿಂದ ಹೊಂದಿ ಕೊಳ್ಳಲು ಮತ್ತೊಮ್ಮೆ ಸಮಯಾವಕಾಶ ಅನಗತ್ಯ. ಈ ಹಿಂದಿನ ಸರಕಾರಗಳು ನೀಡಿರುವ ಘೋಷಣೆ, ಯೋಜನೆಗಳು ಯಾವ ಹಂತದಲ್ಲಿದೆ ಎನ್ನುವುದನ್ನು ಸಚಿವರೆಲ್ಲ ಪರಿಶೀಲಿಸಬೇಕಿದೆ. ಯಾವುದೇ ಗೊಂದಲಗಳು ಇಲ್ಲದೇ ಇರುವುದರಿಂದ, ಅಭಿವೃದ್ಧಿ ಕಾರ್ಯಕ್ಕೆ ಇನ್ನಷ್ಟು ವೇಗ ಕೊಡುವ ನಿಟ್ಟಿನಲ್ಲಿ ಸಚಿವರು ಕೆಲಸ ಮಾಡಬೇಕಿದೆ.

ಬಾಕಿಯಿರುವ ಒಂದುವರೆ ವರ್ಷದಲ್ಲಿ ಚುನಾವಣೆ ಎದುರಾಗುವುದರಿಂದ, ಕಾಮಗಾರಿಗಳಿಗೆ ವೇಗ ಕೊಡುವುದು ರಾಜಕೀಯ ವಾಗಿಯೂ ಅನಿವಾರ್ಯ.