ರಾಜ್ಯದಲ್ಲಿ ಈಗ ಪ್ರತಿಭಟನೆ, ರ‍್ಯಾಲಿಗಳ ಸುಗ್ಗಿ. ವಿಧಾನ ಮಂಡಲ ಅಧಿವೇಶನ ಆರಂಭವಾಗುತ್ತಿದ್ದಂತೆ ಎಲ್ಲ ಸಂಘಟನೆಗಳು ಎಚ್ಚೆತ್ತುಕೊಂಡು ಸಾವಿರಾರು ಜನರನ್ನು ಒಂದೆಡೆ ಸೇರಿಸಿದ್ದನ್ನು ಕಳೆದೆರಡು ದಿನಗಳಲ್ಲಿ ನೋಡಿದ್ದೇವೆ. ಮೇಲಾಗಿ ಹಿಂದಿ ಹೇರಿಕೆ ವಿರುದ್ಧವೂ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದವು.
ಭಾರತದಂತಹ ಸಾರ್ವಭೌಮ, ಸರ್ವಸ್ವತಂತ್ರ ರಾಷ್ಟ್ರದಲ್ಲಿ ಸಂವಿಧಾನ ನಮಗೆ ಎಲ್ಲ ರೀತಿಯ ಸ್ವಾತಂತ್ರ್ಯ, ಹಕ್ಕನ್ನು ನೀಡಿ ನಮ್ಮ ಶಾಂತಿಯುತ ಜೀವನಕ್ಕೆ ಬುನಾದಿ ಹಾಕಿದೆ. ನಾವು ಕೂಡ ನಮಗೆ ನೀಡಿದ ಹಕ್ಕನ್ನು ಬಳಸಿಕೊಳ್ಳಲು ತುದಿಗಾಲಿನಲ್ಲಿದ್ದೇವೆ. ಆದರೆ ಹಕ್ಕಿನ ಜತೆ ನಾವು ಪಾಲಿಸಬೇಕಾದ ಕರ್ತವ್ಯವನ್ನು ಮೂಲೆಗೆ ತಳ್ಳಿದ್ದೇವೆ. ಇಂದು ದೇಶದ ರಕ್ಷಣೆ ಮಾಡಬೇಕಾದರೆ ಮೊದಲು ನಮ್ಮ ರಕ್ಷಣೆಯತ್ತ ಗಮನ ಹರಿಸಬೇಕಿದೆ. ಆದರೆ ಈ ಪ್ರತಿಭಟನೆ, ರ‍್ಯಾಲಿಗಳಿಂದ ಕರೋನಾವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡುವ ಮೂಲಕ ದೇಶದ ರಕ್ಷಣೆಯನ್ನು ಕಡೆಗಣಿಸಲಾಗುತ್ತಿದೆ.
ಪ್ರತಿಭಟನೆಗಳಲ್ಲಿ ಸಾಮಾಜಿಕ ಅಂತರ ಕಾಪಾಡಿ, ಮಾ ಧರಿಸಿ ಎಂದು ಯಾವ ಮಾರ್ಷಲ್‌ಗಳೂ ಬಂದು ಹೇಳುವ ಸ್ಥಿತಿಯಲ್ಲಿರುವುದಿಲ್ಲ. ಪ್ರತಿಭಟನಾಕಾರರೂ ಸ್ವಯಂ ವಿವೇಚನೆಯಿಂದ ಸಾಮಾಜಿಕ ಅಂತರ ಕಾಪಾ ಡುವುದು, ಮಾಸ್ಕ್ ಧರಿಸುವುದನ್ನು ಮಾಡುವುದಿಲ್ಲ. ಕೆಲವರು ಮಾಸ್ಕ್ ಧರಿಸಿದ್ದರೂ ಅದು ಗಡ್ಡಕ್ಕೆ ರಕ್ಷಾ ಕವಚವಾಗಿರುತ್ತದೆಯೇ ವಿನಾಃ ಉಸಿರಾಟಕ್ಕೆ ಆಗಿರುವುದಿಲ್ಲ. ಏನೋ ಪಡೆಯಲು ಹೋಗಿ ಇನ್ನೇನೋ ಕಳೆದು ಕೊಳ್ಳುವುದು ಸರಿಯಲ್ಲ. ಸಂವಿಧಾನಬದ್ಧವಾಗಿ ನಮಗೆ ದೊರಕಬೇಕಿರುವ ಸೌಲಭ್ಯಗಳನ್ನು ಪ್ರತಿಭಟನೆ ಮೂಲಕ ಕೇಳುವುದು ತಪ್ಪಲ್ಲ, ಆದರೆ ಕರೋನಾ ನಿಯಮಗಳನ್ನು ಪಾಲಿಸದೇ ಪ್ರತಿಭಟನೆಗೆ ಇಳಿಯುವುದು ಖಂಡಿತ ತಪ್ಪು. ನಮ್ಮ ದೇಶದಲ್ಲಿ ವ್ಯಾಕ್ಸಿನೇಷನ್ ಬಂದು ಇಷ್ಟು ದಿನವಾದರೂ ಇನ್ನೂ ಶೇಕಡಾ ನೂರರಷ್ಟು ವ್ಯಾಕ್ಸಿನೇಷನ್ ಆಗಿಲ್ಲ.
ಮುಂಬರುವ ಕರೋನಾ ಅಲೆಯಂತೂ ಚಿಕ್ಕ ಮಕ್ಕಳ ದೇಹದೊಳಗೆ ಅಪ್ಪಳಿಸಲು ರೆಡಿಯಾಗಿದೆ. ಅಷ್ಟರೊಳಗೆ ಕರೋನಾವನ್ನು ಒದ್ದು ಓಡಿಸದೇ ಇದ್ದರೆ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳಾಗುವ ಬದಲು ಇಂದಿನ ಮಕ್ಕಳೇ ಮುಂದಿನ ರೋಗಿಗಳು ಎನ್ನಿಸಿಕೊಳ್ಳುವ ದಿನ ಬರುತ್ತದೆ. ಪ್ರತಿಭಟಿಸುವುದು ನಮ್ಮ ಹಕ್ಕು ಗಳಂದು. ಹಾಗೆಯೇ ಅದರ ಜತೆಗೆ ಕರೋನಾ ನಿಯಮಾವಳಿಗಳನ್ನು ಪಾಲಿಸಿ ಪ್ರತಿಭಟಿಸುವುದೂ ನಮ್ಮ ಕರ್ತವ್ಯಗಳಲ್ಲೊಂದು ಎಂದು ನಾವು ಮರೆಯ ಬಾರದು.