Sunday, 15th December 2024

ಬದುಕು ಅಸಹನೀಯವೇ?

ಬೆಂಗಳೂರಿನಲ್ಲಿ ಇತ್ತೀಚೆಗೆ ವರದಿಯಾಗಿರುವ ಎರಡು ಪ್ರಕರಣಗಳು ತಲ್ಲಣಕಾರಿಯಾಗಿವೆ. ಮೊದಲ ಪ್ರಕರಣದಲ್ಲಿ, ಇಬ್ಬರು ಮಕ್ಕಳನ್ನು ಕೊಂದು ಪರಪ್ಪನ ಅಗ್ರಹಾರದ ಜೈಲು ಸೇರಿದ್ದ ತಾಯಿಯೊಬ್ಬಳು ಅಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

‘ಮಾತೃ ಹೃದಯ’, ‘ಕರುಳಿನ ಕೂಗು’ ಇತ್ಯಾದಿ ಸಂವೇದನೆಗಳು, ಪರಿಭಾಷೆಗಳು ಹುಟ್ಟುವುದಕ್ಕೆ ಕಾರಣಳಾದವಳು ತಾಯಿ. ಅಂಥ ಮಮತಾಮಯಿಯೇ
ತನ್ನಿಬ್ಬರು ಮಕ್ಕಳನ್ನು ಕೊಲ್ಲುವಂಥ ನಿಷ್ಠುರ ಹೃದಯಿಯಾಗಿದ್ದು ಹೇಗೆ? ಅದರ ಹಿಂದಿರಬಹುದಾದ ಸಾಮಾಜಿಕ, ಆರ್ಥಿಕ ಅಥವಾ ಕೌಟುಂಬಿಕ ಕಾರಣ ಗಳಾದರೂ ಏನು? ಎಂಬುದನ್ನು ಸಮಾಜಶಾಸಜ್ಞರು, ಮನೋವಿಜ್ಞಾನಿಗಳು ಹಾಗೂ ಮಾನವ ಸಂಬಂಧಗಳ ಪರಿಣತರು ವಿಶ್ಲೇಷಿಸಬೇಕಿದೆ.

ಆ ತಾಯಿಯು ಅಂತಿಮವಾಗಿ ನೇಣಿಗೆ ಕೊರಳೊಡ್ಡಿ ತನ್ನ ಬದುಕನ್ನೂ ಕೊನೆಗೊಳಿಸಿಕೊಂಡಿದ್ದು ಪಶ್ಚಾತ್ತಾಪದ ಫಲಶ್ರುತಿಯೇ ಅಥವಾ ಬೇರಿನ್ನೇನಾದರೂ ಕಾರಣವಿರಬಹುದೇ ಎಂಬುದನ್ನೂ ತಜ್ಞರು ಅಧ್ಯಯನ ಮಾಡಬೇಕಿದೆ. ಮತ್ತೊಂದು ಪ್ರಕರಣದಲ್ಲಿ, ಮಗು ಮಾಡಿಕೊಳ್ಳುವ ವಿಚಾರದಲ್ಲಿ ದಂಪತಿ ನಡುವೆ ಜಗಳವಾಗಿ ಪತಿಯೇ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘೋರ ಘಟನೆ ಜರುಗಿದೆ. ಇಲ್ಲಿಯೂ, ಪರಸ್ಪರ ಹೊಂದಾಣಿಕೆ ಮತ್ತು ಅನುರಾಗಕ್ಕೆ ಕಾರಣವಾಗಬೇಕಿದ್ದ ದಾಂಪತ್ಯವು, ಮತ್ತೊಂದು ಜೀವ ವನ್ನೇ ಇಲ್ಲವಾಗಿಸುವಷ್ಟರ ಮಟ್ಟಿಗಿನ ಅತಿರೇಕದ ಕ್ಷಣವಾಗಿ ಬದಲಾಗಿದ್ದು ಹೇಗೆ? ಇದಕ್ಕೆ ಆ ಕ್ಷಣದ ದುಡುಕು ಮತ್ತು ಕೋಪ ಕಾರಣವಾಯಿತೇ ಅಥವಾ ಬಹಳ ದಿನಗಳಿಂದ ಮಡುಗಟ್ಟಿದ್ದ ಅಸಹನೆ-ಆಕ್ರೋಶಗಳು ಅಂದು ರೌದ್ರರೂಪವನ್ನು ತಳೆದವೇ? ಎಂಬುದನ್ನು ಬಲ್ಲವರು ವಿಶ್ಲೇಷಿಸಬೇಕಿದೆ.

ಒಬ್ಬರ ಬದುಕು ಇದ್ದಂತೆ ಇನ್ನೊಬ್ಬರದು ಇರುವುದಿಲ್ಲ, ಪ್ರತಿಯೊಬ್ಬರಿಗೂ ಬದುಕಿನಲ್ಲಿ ಅವರದೇ ಆದ ಸವಾಲು-ಸಮಸ್ಯೆಗಳು, ನೋವುಗಳು ಇರುತ್ತವೆ
ಎಂಬುದು ಖರೆ. ಇದು ಮಾನವಕುಲ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಇರುವಂಥ ಪರಿಸ್ಥಿತಿಯೇ. ಆದರೆ ಈಚೀಚೆಗೆ ಬದುಕಿನಲ್ಲಿ ತಾಳ್ಮೆ, ಸೈರಣೆ ಮತ್ತು
ಹೊಂದಾಣಿಕೆಗಳೇ ಕಡಿಮೆಯಾಗುತ್ತಿರುವುದು ಆತಂಕದ ಬೆಳವಣಿಗೆ. ಎಲ್ಲ ಸವಾಲು-ಸಂಕಷ್ಟಗಳ ನಡುವೆಯೂ ಬದುಕನ್ನು ನಿಧಾನವಾಗಿ ಕಟ್ಟಿಕೊಳ್ಳುವ
ಬದಲಿಗೆ, ಧಾವಂತಕ್ಕೆ ಒಡ್ಡಿಕೊಂಡು ಮನುಷ್ಯ ಅನಪೇಕ್ಷಿತ ಸ್ಥಿತಿಯ ಬಲಿಪಶು ವಾಗುತ್ತಿದ್ದಾನೆ. ಇಂಥ ಸ್ಥಿತಿಯನ್ನು ನಿಭಾಯಿಸುವ ಬಗೆಯೆಂತು ಎಂಬುದನ್ನು
ಬಲ್ಲವರೇ ಹೇಳಬೇಕು.