Thursday, 12th December 2024

ಆಧಾರ್ ಕಾರ್ಡ್ ಲಿಂಕ್‌ಗೆ ಸಹಕರಿಸಿ

ದೇಶದಲ್ಲಿ ಚುನಾವಣಾ ಅಕ್ರಮಗಳನ್ನು ತಡೆಯಲು ಕೈಗೊಂಡಿರುವ ಸುಧಾರಣಾ ಕ್ರಮಗಳಂದಾಗಿರುವ ಮತದಾರರ ಗುರುತಿನ ಚೀಟಿ(ಎಪಿಕ್)ಯನ್ನು ಆಧಾರ್ ಕಾರ್ಡ್ ಜತೆ ಜೋಡಣೆ ಮಾಡುವ ಕಾರ್ಯಕ್ಕೆ ರಾಜ್ಯದಲ್ಲಿ ಚಾಲನೆ ದೊರೆತು ೧೫ ದಿನಗಳಾದರೂ ಮತದಾರರೇ ಆಧಾರ್ ಜೋಡಣೆಗೆ ನಿರಾಸಕ್ತಿ ತೋರಿಸುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ. ವಿಶೇಷವಾಗಿ ಹಳ್ಳಿಗಳಿಂದ ನಗರ ಪ್ರದೇಶಗಳಿಗೆ ಬಂದು ವಾಸಿಸುವ ಜನರೇ ಆಧಾರ್ ಕಾರ್ಡ್ ಜೋಡಣೆಗೆ ಆಸಕ್ತಿ ತೋರಿತ್ತಿಲ್ಲ ಎನ್ನಲಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಈ ಡಬಲ್ ಮತದಾರರ ಸಂಖ್ಯೆ ಹೆಚ್ಚಾಗಿದೆ. ತಾವು ಹುಟ್ಟಿದ ಊರಲ್ಲೂ. ಕೆಲಸ ಮಾಡುತ್ತಿರುವ, ಜೀವನ ನಡೆಸುತ್ತಿರುವ ಪ್ರದೇಶ ಗಳಲ್ಲೂ ಮತದಾರರ ಚೀಟಿಯನ್ನು ಹೊಂದಿ ಸಮಯ ಸಿಕ್ಕಾಗೆ ಎರಡೂ ಕಡೆ ಮತ ಚಲಾಯಿಸುವ ಉಮೇದು ಹೊಂದಿದ್ದಾರೆ.

ವಿದ್ಯಾವಂತರು ಎನಿಸಿಕೊಂಡಿರುವ ನಾಗರಿಕರೇ ಸರಕಾರದ ಸುಧಾರಣೆ ಕ್ರಮಗಳಿಗೆ ಕೈಜೋಡಿಸದಿರುವುದು ಬೇಸರದ ಸಂಗತಿ. ಆಧಾರ್-ವೋಟರ್ ಐಡಿ ಜೋಡಣೆಯಲ್ಲಿ ಯಾವುದೇ ತಪ್ಪು ನುಸುಳಬಾರದು ಎಂಬ ಕಾಳಜಿಯಿಂದ ಸರಕಾರ ಈ ಕೆಲಸವನ್ನು ಸರಕಾರಿ ಶಾಲಾ ಶಿಕ್ಷಕರ ಹೆಗಲಿಗೆ ಹೊರಿಸಿದೆ.

ಈ ಬಗ್ಗೆ ತರಬೇತಿಯನ್ನು ನೀಡಿ ಶಿಕ್ಷಕರಿಗೆ ವಾರಕ್ಕಿಷ್ಟು ಎಂಬ ಗುರಿಯನ್ನೂ ನಿಗದಿಪಡಿಸಲಾಗಿದೆ. ಈ ಗುರಿ ಸಾಧನೆಗೆ ಶಿಕ್ಷಕರು ತಮ್ಮೆ ಕೆಲಸವನ್ನೂ ಬದಿಗೊತ್ತಿ ಮತದಾರರ ಬೆನ್ನು ಹತ್ತಿದ್ದಾರೆ. ಇದರ ಹೊಣೆ ಹೊತ್ತಿರುವ ಶಿಕ್ಷಕರು ಪ್ರತಿಯೊಬ್ಬ ಮತದಾರ ನಿಗೆ ಕರೆ ಮಾಡಿ ‘ಆಧಾರ್ ಜತೆ ವೋಟರ್ ಐಡಿ ಜೋಡಿಸಲು ದಯವಿಷ್ಟು ಬನ್ನಿ’ ಎಂದು ಎಷ್ಟು ಮನವಿ ಮಾಡಿದರೂ
ಯಾರೊಬ್ಬರೂ ಓಗೊಡುತ್ತಿಲ್ಲ.

ಬಹುತೇಕ ಮಂದಿ ‘ತಾವು ಊರಿನಲ್ಲಿಲ್ಲ, ಬೇರೆ ಊರಿನಲ್ಲಿ ನೆಲೆಸಿದ್ದು ಮತದಾನಕ್ಕೆ ಮಾತ್ರ ಊರಿಗೆ ಬರುತ್ತಿದ್ದೇವೆ’ ಎಂಬ ನೆಪ ಹೇಳಿ ಸಾಗಹಾಕುತ್ತಿದ್ದಾರೆ. ಹೀಗಾಗಿ ಆಧಾರ್ ಜತೆ ವೋಟರ್ ಐಡಿ ಜೋಡಣೆ ಪ್ರಕ್ರಿಯೆ ಶಿಕ್ಷಕರಿಗೆ ತಲೆನೋವಿನ ವಿಷಯ ವಾಗಿದೆ. ಆದ್ದರಿಂದ ನಾಗರಿಕರು ಮತದಾರರ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಆಸಕ್ತಿ ವಹಿಸಬೇಕಿದೆ. ಆ ಮೂಲಕ ಎರಡು ಕಡೆ ಮತದಾನ ಸೇರಿದಂತೆ ಚುನಾವಣೆ ಅಕ್ರಮ ತಡೆಯಲು ಪ್ರಯತ್ನಿಸಬೇಕಿದೆ.