Thursday, 12th December 2024

ಎಲ್‌ಕೆಜಿ-ಯುಕೆಜಿಗೆ ಅವಸರ ಬೇಡ

ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಹೆಸರಿನಲ್ಲಿ ರಾಜ್ಯ ಸರ್ಕಾರವು ಪ್ರಸಕ್ತ (೨೦೨೪-೨೫) ಶೈಕ್ಷಣಿಕ ಸಾಲಿನಿಂದಲೇ ೨,೭೮೬ ಎಲ್ಕೆಜಿ- ಯುಕೆಜಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲು ನಿರ್ಧರಿಸಿದೆ.

ಹಾಲಿ ಇರುವ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಈ ತರಗತಿಗಳನ್ನು ಆರಂಭಿಸಲು ಸರಕಾರ ಉದ್ದೇಶಿಸಿದೆ. ಮೇಲ್ನೋಟಕ್ಕೆ ಸರಕಾರದ ಈ
ನಿರ್ಧಾರ ಸರಿಯಾಗಿಯೇ ಇದೆ. ರಾಜ್ಯಾದ್ಯಂತ ಪೋಷಕರಿಂದ ಎಲ್‌ಕೆಜಿ- ಯುಕೆಜಿ ತರಗತಿಗಳಿಗೆ ಬೇಡಿಕೆ ಇದೆ. ತಮ್ಮ ಮಕ್ಕಳನ್ನು ಇಂತಹ ತರಗತಿಗಳಿಗೆ
ಸೇರಿಸಲೇಬೇಕೆಂಬ ಕಾರಣದಿಂದ ದುಬಾರಿ ಫೀಸು ಕೊಟ್ಟು ಖಾಸಗಿ ಶಾಲೆಗಳಿಗೆ ದಾಖಲು ಮಾಡುತ್ತಿದ್ದಾರೆ. ಸರಕಾರಿ ಶಿಕ್ಷಣ ವ್ಯವಸ್ಥೆಯ ಉಳಿವಿನ ದೃಷ್ಟಿಯಿಂದ ಎಲ್‌ಕೆಜಿ, ಯುಕೆಜಿ ಹೆಸರಿನಲ್ಲಿ ತರಗತಿಗಳನ್ನು ಆರಂಭಿಸುವುದು ಅನಿವಾರ‍್ಯವಾಗಿದೆ. ಆದರೆ ಇಲ್ಲಿ ಸರಕಾರದ ಮುಂದೆ ಹಲವು ಸವಾಲು ಗಳಿವೆ.

ಉದ್ದೇಶಿತ ಎಲ್‌ಕೆಜಿ- ಯುಕೆಜಿ ತರಗತಿಗಳಿಗೆ ಪಾಠ ಮಾಡುವವರಾರು? ಹಾಲಿ ಇರುವ ಅಂಗನವಾಡಿ ಶಿಕ್ಷಕಿಯರು ಪಾಠ ಮಾಡಲು ಮಾಡಲು ಸಮ
ರ್ಥರೇ? ಇವರಿಗೆ ಈ ನಿಟ್ಟಿನಲ್ಲಿ ತರಬೇತಿ ನೀಡುವ ಕೆಲಸ ನಡೆಯಲಿದೆಯೇ? ಇವರ ಬದಲು ಗೌರವಧನದ ಆಧಾರದಲ್ಲಿ ಎಸ್‌ಡಿಎಂಸಿಯವರು ಶಿಕ್ಷಕಿಯರನ್ನು ನೇಮಿಸಲು ಅವಕಾಶವಿದೆಯೇ, ಈ ತರಗತಿಗಳಿಗೆ ಪಠ್ಯಕ್ರಮ ಸಿದ್ಧವಿದೆಯೇ? ಹಾಲಿ ಇರುವ ಅಂಗನವಾಡಿಗಳ ಭವಿಷ್ಯವೇನು? ಇರುವ ಒಂದೇ ಕೊಠಡಿಯಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ನಡೆಸುವ ಬಗೆ ಹೇಗೆ? ಯುಕೆಜಿಯಲ್ಲಿ ಕಲಿತ ಮಕ್ಕಳು ಮತ್ತೆ ಇಂಗ್ಲಿಷ್ ಶಾಲೆಗಳೇ ಬೇಕು ಎಂದರೆ ಎಲ್ಲಿಗೆ ಹೋಗಬೇಕು? ಹಾಲಿ ಇರುವ ಕನ್ನಡ ಮಾಧ್ಯಮ ಶಾಲೆಗಳೆಲ್ಲವನ್ನೂ ಸರಕಾರ ಆಂಗ್ಲ ಮಾಧ್ಯಮಕ್ಕೆ ಬದಲಾಯಿಸುವುದೇ? ಇಂಗ್ಲಿಷ್ ಕಲಿಕೆಗಾಗಿ ಗ್ಲೋಬಲ್ ಟೆಂಡರ್ ಕರೆದು ಯಾವುದಾದರೂ ಖಾಸಗಿ ಕಂಪನಿ ಮೂಲಕ ಶಿಕ್ಷಕರನ್ನು ನೇಮಿಸುವ ಉದ್ದೇಶವಿ ದೆಯೇ? ಇಂದಲ್ಲ, ನಾಳೆ ಇಂತಹ ಹತ್ತು ಹಲವು ಪ್ರಶ್ನೆಗಳಿಗೆ ಸರಕಾರ ಉತ್ತರ ನೀಡ ಲೇಬೇಕಿದೆ.

ಈ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನೊಳಗೊಂಡ ತಜ್ಞರ ಸಮಿತಿ ರಚಿಸಿ ಅವರ ಶಿಫಾರಸ್ಸು ಹಾಗೂ ಮಾರ್ಗಸೂಚಿಗಳ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಈಗಾಗಲೇ ಮಂಜೂರಾದ ೨,೭೮೬ ಶಾಲೆಗಳನ್ನು ಹೊರತುಪಡಿಸಿ ಉಳಿದೆಡೆ ಎಲ್‌ಕೆಜಿ ಶಾಲೆಗಳನ್ನು ಆರಂಭಿಸುವುದಿಲ್ಲ ಎಂದು ಸರಕಾರ ತಿಳಿಸಿದೆ. ಇಲ್ಲಿ ಅವಸರದ ತೀರ್ಮಾನಗಳನ್ನು ಕೈಗೊಂಡು ಶಿಕ್ಷಣ ಕ್ಷೇತ್ರವನ್ನು ಮತ್ತಷ್ಟೂ ಗೊಂದಲಕ್ಕೆ ತಳ್ಳಬಾರದು. ಸರಕಾರದ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು.