Sunday, 15th December 2024

ಲಾಕ್‌ಡೌನ್ – ಪ್ಯಾಕೇಜ್‌ನಷ್ಟೆ ಮತ್ತಷ್ಟು ಕ್ರಮಗಳು ಅವಶ್ಯ

ಕೋವಿಡ್ ಎರಡನೆ ಹಂತದ ಅಲೆಯಿಂದಾಗಿ ರಾಜ್ಯದಲ್ಲಿ ಆತಂಕ ಆವರಿಸಿದೆ. ಇಡೀ ರಾಜ್ಯ ಚಿಂತಾಜನಕ ಸ್ಥಿತಿಗೆ ತಲುಪಿದೆ.
ಈ ವೇಳೆ, ಸೋಂಕು ಹರಡುವಿಕೆ ತಡೆಗಟ್ಟಲು ಸದ್ಯದ ಮಟ್ಟಿಗೆ ಇರುವ ಪ್ರಮುಖ ಮಾರ್ಗ ಲಾಕ್‌ಡೌನ್ ಎರಡನೆ ಹಂತವನ್ನು ಪೂರ್ಣಗೊಳಿಸಲು ಕೆಲವೇ ದಿನಗಳು ಉಳಿದಿವೆ. ಮೂರನೆ ಹಂತದ ಲಾಕ್‌ಡೌನ್ ಜಾರಿಗೂ ಮುನ್ಸೂಚನೆಗಳು ದೊರೆಯುತ್ತಿವೆ. ಪ್ರತಿಪಕ್ಷಗಳಿಂದಲೂ ಲಾಕ್‌ಡೌನ್‌ಗಾಗಿ ಪ್ರಬಲ ಒತ್ತಾಯಗಳು ಕೇಳಿಬರುತ್ತಿವೆ.

ಒಟ್ಟಾರೆ ರಾಜ್ಯದಲ್ಲಿ ಕೇಳಿಬರುತ್ತಿರುವ ಪ್ರಮುಖವಾದ ಸಂಗತಿಗಳೆಂದರೆ ಲಾಕ್‌ಡೌನ್ ಜಾರಿಗೊಳಿಸಿ ಹಾಗೂ ಜನತೆಗೆ ಪ್ಯಾಕೇಜ್ ನೀಡಿ ಎಂಬುದು. ಮೇಲ್ನೋಟಕ್ಕೆ ಈ ಒತ್ತಾಯ ಸರಿ ಅನಿಸಬಹುದು, ಆದರೆ ಇದು ಪರಿಹಾರವಲ್ಲ. ಇದೀಗ ನಮಗೆ ಲಾಕ್‌ಡೌನ್ ಎಂಬುದು ಸುರಕ್ಷತೆಯ ಹಾದಿಯನ್ನು ಕ್ರಮಿಸುವುದಕ್ಕೆ ಹಾಕಿಕೊಂಡ ಟಾರ್ಗೆಟ್ ಆಗಬೇಕೆ ವಿನಾ ಪದೇ ಪದೆ ವಿಸ್ತರಣೆಗೆ ಅವಕಾಶವಾಗಬಾರದು. ಇಷ್ಟೊಂದು ವೇಗದಲ್ಲಿ ಕ್ರಮಗಳನ್ನು ಅನುಸರಿಸದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅಪಾಯ ವನ್ನು ಎದುರಿಸಬೇಕಾಗುತ್ತದೆ. ಈ ಹೇಳಿಕೆಗೂ ಕಾರಣವಿದೆ.

ದೇಶದಲ್ಲಿ ಕೋವಿಡ್ ಏರಿಕೆಯಂತೆಯೇ ಇಳಿಕೆಯೂ ಆಗುತ್ತಿದೆ. ಆದರೆ ಈ ಏರಿಳಿತಗಳ ನಡುವೆಯೇ ಸಾವಿನ ಸಂಖ್ಯೆ 278719ಕ್ಕೆ ಏರಿಕೆಯಾಗಿದೆ. ಇದರಿಂದ ಸುರಕ್ಷತೆಗೆ ಮತ್ತಷ್ಟು ವೇಗ ದೊರೆಯಬೇಕಾದ ಅನಿವಾರ್ಯತೆ ಕಂಡುಬರುತ್ತಿದೆ. ದೇಶದಲ್ಲಿ ಶೇ.2೦ ರಷ್ಟು ಮಾತ್ರವೇ ಪರೀಕ್ಷೆ ನಡೆದಿದ್ದು, ಇನ್ನೂ ಶೇ.80ರಷ್ಟು ಪರೀಕ್ಷೆ ಬಾಕಿ ಇದೆ. ಗ್ರಾಮೀಣ ಭಾಗಗಳಲ್ಲಿಯೂ ಪೂರ್ಣ ಪ್ರಮಾಣ ದಲ್ಲಿ ಪರೀಕ್ಷೆ ನಡೆದಿಲ್ಲ. ಆದ್ದರಿಂದ ಭಾರತ ನೀಡುತ್ತಿರುವ ಸಾವಿನ ಸಂಖ್ಯೆಯ ಪ್ರಮಾಣ ವಿಶ್ವಾಸರ್ಹವಲ್ಲ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆಯ ತಜ್ಞೆ ಸೌಮ್ಯ ಸ್ವಾಮಿನಾಥನ್ ಹೇಳಿಕೆ ನೀಡಿರುವುದಾಗಿ ಸಾಮಾಜಿಕ ಜಾಲತಾಣ ವೊಂದು ಬಹಿರಂಗ ಪಡಿಸಿದೆ. ಈ ಹೇಳಿಕೆ ರಾಜ್ಯಕ್ಕೂ ಅನ್ವಯಿಸಲಿದೆ. ಆದ್ದರಿಂದ ಈ ವೇಳೆ ಪರೀಕ್ಷೆ, ಲಸಿಕೆ ಲಭ್ಯತೆ, ಹೊಸ ಸಾಧ್ಯತೆಗಳ ಬಗ್ಗೆ ರಾಜ್ಯ ಸರಕಾರ ಮಹತ್ವದ ನಿರ್ಣಯಗಳನ್ನು ಅನುಸರಿಸಬೇಕಾದ ಅವಶ್ಯಕತೆಯಿದೆ. ಪ್ರತಿಪಕ್ಷಗಳು, ಜನತೆಯ ಸಹಭಾಗಿತ್ವ ಮತ್ತಷ್ಟು ಪರಿಣಾಮಕಾರಿ.