Thursday, 12th December 2024

ಇದು ಲೋಕಾ ಭಿನ್ನರುಚಿ!

‘ಲೋಕೋ ಭಿನ್ನ ರುಚಿಃ’ ಎಂಬುದೊಂದು ಆಯೋಕ್ತಿ. ಆದರೆ ರಾಜ್ಯದ ವಿವಿಧೆಡೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು, ೧೩ ಸರಕಾರಿ ಅಧಿಕಾರಿಗಳ ಮನೆ, ಕಚೇರಿ ಸೇರಿದಂತೆ ೬೨ ನೆಲೆಗಳಲ್ಲಿ ಕೋಟ್ಯಂತರ ರುಪಾಯಿ ಮೌಲ್ಯದ ಆಸ್ತಿಪಾಸ್ತಿಗಳಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ತನ್ಮೂಲಕ, ದಾಳಿಗೊಳಗಾದವರಿಗೆ ‘ಲೋಕಾ’  ಭಿನ್ನರುಚಿ ಯನ್ನೇ ತೋರಿಸಿದೆ.

ದಾಳಿಯ ವೇಳೆ ಅಪಾರ ಪ್ರಮಾಣದ ನಗದು, ಚಿನ್ನ-ಬೆಳ್ಳಿ ಆಭರಣಗಳು, ವಿದೇಶಿ ಉಡುಗೊರೆ, ಮೊಬೈಲ್ ಫೋನ್, ನಿವೇಶನ ಮತ್ತು ಫಾರ್ಮ್‌ಹೌಸ್‌ಗಳ ಖರೀದಿಯ ದಾಖಲೆಪತ್ರಗಳು ಪತ್ತೆಯಾಗಿವೆ ಮತ್ತು ಹೀಗೆ ದಾಳಿಗೆ ಒಳಗಾದವರಲ್ಲಿ ಸಹಾಯಕ ಎಂಜಿನಿಯರ್, ಗ್ರಾಮ ಪಂಚಾಯಿತಿ ಪಿಡಿಒ, ಹೆಚ್ಚುವರಿ ಡಿಸಿ, ಅರಣ್ಯ ವಲಯದ ಅಧಿಕಾರಿ ಹೀಗೆ ವಿವಿಧ ಸ್ತರದ ‘ಸರಕಾರಿ ಸೇವಕರು’ ಸೇರಿದ್ದಾರೆ ಎಂಬುದು ಲಭ್ಯಮಾಹಿತಿ. ‘ಜನಸೇವೆಯೇ ಜನಾರ್ದನನ ಸೇವೆ’ ಎಂಬ ಮಾತೇ ಧ್ಯೇಯವಾಕ್ಯವಾಗಬೇಕಿದ್ದ ಇಂಥವರಲ್ಲಿ ಇಂಥದೊಂದು ಸಂಪತ್ತು ಸಂಗ್ರಹಣೆಯ ಚಿತ್ತಸ್ಥಿತಿ ರೂಪುಗೊಂಡಿದ್ದಾದರೂ ಹೇಗೆ? ಇವರ ಧಾರ್ಷ್ಟ್ಯ ಎಂಥದ್ದು? ಎಂದು ಅಚ್ಚರಿಯಾಗುತ್ತದೆ.

ಹೀಗೆ ಗಂಟುಮಾಡುವ ಧೋರಣೆ ಇರುವವರು ನಿಜಾರ್ಥದಲ್ಲಿ ಜನಸೇವೆಗೆ ಮನಸ್ಸು ಮಾಡಿಯಾರೇ? ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ‘ಅಕ್ರಮ ಸಂಪಾದನೆ ಅಮೇಧ್ಯಕ್ಕೆ ಸಮ’ ಎಂದಿದ್ದಾರೆ ಮಹಾತ್ಮರೊಬ್ಬರು. ಪರಿಶ್ರಮದ ದುಡಿಮೆಯಿಂದ
ಸಂಪಾದಿಸಿಕೊಂಡ ಹಣ ಮಾತ್ರವೇ ನಮ್ಮದು, ಅದರಿಂದ ದಕ್ಕುವ ಅನ್ನ ಮಾತ್ರವೇ ಮೈಗೆ ಹತ್ತುವುದು ಎಂಬ ಸರಳಸತ್ಯವನ್ನು ಇಂಥವರು ಮನಗಾಣುವುದು ಯಾವಾಗ? ಇವರ‍್ಯಾರೂ ನಿರಕ್ಷರ ಕುಕ್ಷಿಗಳಲ್ಲ ಎಂಬುದು ನಿಮ್ಮ ಗಮನಕ್ಕೆ. ಅಂದರೆ, ಸಾಕ್ಷರ ರಾಗಿದ್ದೂ ಇವರು ಅಕ್ರಮ ಸಂಪತ್ತಿನ ಸಂಗ್ರಹಣೆಯಲ್ಲಿ ತೊಡಗಿದ್ದರೆಂದರೆ, ಇವರು ಕಲಿತಿದ್ದು ಸಾಧನೆಯೆಡೆಗಿನ ಮಾರ್ಗ ವನ್ನೋ, ಅಕ್ರಮ ಸಂಪಾದನೆಯೆಡೆಗಿನ ದುರ್ಮಾರ್ಗವನ್ನೋ? ಇಂಥವರು ಮುಂದಿನ ಪೀಳಿಗೆಗೆ ರವಾನಿಸುವ ಸಂದೇಶವೇನು?
ಸಿರಿವಂತರಾಗುವುದು ಬೇಡ ಎಂಬುದಾಗಿ ಯಾವುದೇ ದೇಶದ ಸಂಸ್ಕೃತಿ ಯಾವತ್ತೂ ಹೇಳಿಲ್ಲ; ಆದರೆ ಸಿರಿವಂತಿಕೆಯ ಮಾರ್ಗ ಯುಕ್ತವಾಗಿರಬೇಕು. ದುಡಿಮೆಗೆ ಇಳಿಯುವವರು ಈ ಸರಳಸತ್ಯವನ್ನು ಅರಿತರೆ ಒಳಿತು.