Thursday, 12th December 2024

ಮಾಡಾಳು ಲಂಚ ಪ್ರಕರಣ: ನಿಷ್ಪಕ್ಷಪಾತ ತನಿಖೆಯಾಗಲಿ

ಕರ್ನಾಟಕದ ಹೆಮ್ಮೆಗಳಲ್ಲಿ ಒಂದಾಗಿರುವ ಕೆಎಸ್‌ಡಿಎಲ್ (ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ) ಈಗ ಭಾರೀ ಚರ್ಚೆಯಲ್ಲಿದೆ. ಅದಕ್ಕೆ ಮುಖ್ಯ ಕಾರಣ, ಕಚ್ಚಾವಸ್ತು ಖರೀದಿ ಟೆಂಡರ್ ಪ್ರಕ್ರಿಯೆಯಲ್ಲಿ ಕೇಳಿ ಬಂದ ಲಂಚಾವತಾರ. ಈ ಪ್ರಕರಣದಲ್ಲಿ ಕೆಎಸ್‌ಡಿಎಲ್ ಅಧ್ಯಕ್ಷರಾಗಿದ್ದ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕೆ.ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಆದರೆ ಅವರಿಗೆ ನಿರೀಕ್ಷಣಾ ಜಾಮೀನು ದೊರೆತಿದೆ. ಅಪ್ಪನ ಪರವಾಗಿ ? ೪೦ ಲಕ್ಷ ಲಂಚ ಪಡೆದ ಆರೋಪದ ಮೇಲೆ ಶಾಸಕರ ಮಗ, ಬೆಂಗಳೂರು ಜಲಮಂಡಳಿಯ ಪ್ರಧಾನ ಲೆಕ್ಕಾಧಿಕಾರಿ ಪ್ರಶಾಂತ್ ಮಾಡಾಳ್ ಹಾಗೂ ಇತರ ನಾಲ್ವರನ್ನು ಬಂಧಿಸಲಾಗಿದೆ.

ದಾಳಿಯ ಸಂದರ್ಭದ ಸಂದಾಯವಾದ ? 1.62 ಕೋಟಿ ಲಂಚದ ಹಣ ಹಾಗೂ ವಿರೂಪಾಕ್ಷಪ್ಪ ಮನೆಯಲ್ಲಿ ನಡೆಸಿದ ಶೋಧದ ವೇಳೆ ಪತ್ತೆಯಾದ ? 6.10 ಕೋಟಿ ನಗದನ್ನು ತನಿಖಾ ತಂಡ ವಶಕ್ಕೆ ಪಡೆದಿದೆ. ಅಷ್ಟೇ ಅಲ್ಲದೆ, ವಿರೂಪಾಕ್ಷಪ್ಪ ಈ ಸಂಸ್ಥೆಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಡೆದಿರುವ ? 700 ಕೋಟಿಗೂ ಹೆಚ್ಚು ಮೌಲ್ಯದ ಕಚ್ಚಾವಸ್ತುಗಳ ಖರೀದಿ ಪ್ರಕ್ರಿಯೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂಬ ಸುಳಿವು ತನಿಖಾ ತಂಡಕ್ಕೆ ಸಿಕ್ಕಿದೆ.

ರಾಜ್ಯದಲ್ಲಿ ದಶಕಗಳಿಂದ ಸದೃಢವಾಗಿ ಬೆಳೆದು ನಿಂತಿರುವ ಕೆಎಸ್‌ಡಿಎಲ್‌ನಲ್ಲಿ ದುಪ್ಪಟ್ಟು ಬೆಲೆಗೆ ಕಚ್ಚಾವಸ್ತು ಖರೀದಿಸಿ ನೂರಾರು ಕೋಟಿ ರುಪಾಯಿ ಲಪಟಾಯಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಜನರ ನಂಬಿಕೆಯ ಬಲದಿಂದಲೇ ಹೆಮ್ಮರವಾಗಿ ಬೆಳೆದ ಸಂಸ್ಥೆಗೆ ಈಗ ಕಪ್ಪಮಸಿ ಅಂಟಿದಂತಾ ಗಿದೆ. ಆದ್ದರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ಕೊಡಿಸುವಲ್ಲಿ ಲೋಕಾಯುಕ್ತರು ಮುಂದಾಗಬೇಕು. ಯಾವುದೇ ಒತ್ತಡಕ್ಕೂ ಮಣಿಯದೆ ನಿಷ್ಪಕ್ಷ ಪಾತವಾಗಿ ತನಿಖೆಯನ್ನು ಮುಂದುವರಿಸಬೇಕು.

ಲೋಕಾಯುಕ್ತ ಪೊಲೀಸರು ಪ್ರಕರಣದ ತನಿಖೆಯಲ್ಲಿ ಲೋಪ ಆಗದಂತೆ ಎಚ್ಚರಿಕೆ ವಹಿಸಬೇಕು. ತನಿಖೆಯನ್ನು ಲಂಚ ಪ್ರಕರಣಕ್ಕೆ ಸೀಮಿತಗೊಳಿಸ ಬಾರದು. ಕೆಎಸ್‌ಡಿಎಲ್‌ನಲ್ಲಿ ನಡೆದಿರಬಹುದಾದ ಎಲ್ಲ ಅವ್ಯವಹಾರಗಳ ಕುರಿತೂ ಸಮಗ್ರವಾದ ತನಿಖೆ ನಡೆಸಬೇಕು. ಆ ಮೂಲಕ ಲೋಕಾಯುಕ್ತ ಸಂಸ್ಥೆಯ ಧಾಡಸಿತನವನ್ನು ಪ್ರದರ್ಶಿಸಬೇಕು.