ಹುಬ್ಬಳ್ಳಿ-ಧಾರವಾಡ, ಗದಗ, ನರಗುಂದ, ನವಲಗುಂದ ಸೇರಿದಂತೆ ಕಿತ್ತೂರು ಕರ್ನಾಟಕದ ಹದಿಮೂರು ಪಟ್ಟಣ ಪ್ರದೇಶ ಗಳು ಹಾಗೂ ನೂರಕ್ಕೂ ಅಧಿಕ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದ ಮಹದಾಯಿ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗವು ಕೊನೆಗೂ ಅನುಮೋದನೆ ನೀಡಿದೆ.
ಯೋಜನೆಯ ಅನುಷ್ಠಾನಕ್ಕಾಗಿ ಬೇಕಾದ ೩೩ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಬಳಸಿಕೊಳ್ಳಲು ರಾಜ್ಯ ಅರಣ್ಯ ಇಲಾಖೆ ಯಿಂದಲೂ ಒಪ್ಪಿಗೆ ದೊರೆತಿದ್ದು, ಆ ಪ್ರಸ್ತಾವ ಕೂಡ ಅನುಮೋದನೆಗಾಗಿ ಕೇಂದ್ರ ಅರಣ್ಯ ಇಲಾಖೆಗೆ ಸಲ್ಲಿಕೆ ಯಾಗಿದೆ. ಕುಡಿಯುವ ನೀರಿನ ಯೋಜನೆ ಇದಾಗಿದ್ದರಿಂದ ಪರಿಸರ ಇಲಾಖೆ ಯಿಂದ ಒಪ್ಪಿಗೆ ಪಡೆಯುವ ಪ್ರಮೇಯ ಬರುವುದಿಲ್ಲ. ಹೀಗಾಗಿ ಯೋಜನೆಯ ಅನುಷ್ಠಾನದ ಹಂತದಲ್ಲಿದ್ದ ಬಹುತೇಕ ಅಡೆತಡೆಗಳು ಈಗ ನಿವಾರಣೆ ಆದಂತಾಗಿವೆ.
ಇನ್ನು ಯಾವುದೇ ವಿಳಂಬವಿಲ್ಲದೆ ಯೋಜನೆಯನ್ನು ಕಾರ್ಯಗತಗೊಳಿಸುವತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಪ್ರವೃತ್ತರಾಗಬೇಕಿದೆ. ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನು ನಾಲ್ಕು ತಿಂಗಳಷ್ಟೇ ಬಾಕಿ ಇರುವಾಗ ಜಲ ಆಯೋಗ ದಿಂದ ಡಿಪಿಆರ್‌ಗೆ ದಿಢೀರ್ ಎಂದು ಅನುಮೋದನೆ ಸಿಕ್ಕಿದೆ. ಇದರ ಹಿಂದೆ ರಾಜಕೀಯ ಲೆಕ್ಕಾಚಾರ ಇದೆ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ.
ಹುಬ್ಬಳ್ಳಿಯಲ್ಲಿ ಜನವರಿ ೨ರಂದು ಕಾಂಗ್ರೆಸ್ ಆಯೋಜಿಸಿದ್ದ ಮಹದಾಯಿ ಜನಾಂದೋಲನವೂ ಚುನಾವಣೆಯನ್ನು ಗುರಿ ಯಾಗಿಸಿಕೊಂಡಿರುವಂತಹದ್ದೇ. ಜಲ ಆಯೋಗದ ಅನುಮೋದನೆ, ಹುಬ್ಬಳ್ಳಿಯಲ್ಲಿ ಆಯೋಜಿಸಿರುವ ಜನಾಂದೋಲನ ಈ ಎರಡರ ಹಿಂದಿನ ರಾಜಕೀಯ ಏನೇ ಇರಲಿ, ಮಹದಾಯಿ ಯೋಜನೆ ಕಾಲಮಿತಿಯಲ್ಲಿ ಅನುಷ್ಠಾನಗೊಳ್ಳಬೇಕು ಎನ್ನುವುದು ಎಲ್ಲರ ಅಭಿಪ್ರಾಯ.
ಟೆಂಡರ್ ಪ್ರಕ್ರಿಯೆಯನ್ನು ಆದಷ್ಟು ಬೇಗ ಶುರು ಮಾಡುವುದಾಗಿ ಮುಖ್ಯಮಂತ್ರಿ ಮತ್ತು ಯವರೇನೋ ಪ್ರಕಟಿಸಿದ್ದಾರೆ.
‘ಕಾಮಗಾರಿಯನ್ನು ಒಂದೇ ವರ್ಷದಲ್ಲಿ ಪೂರ್ಣಗೊಳಿಸದಿದ್ದರೆ ನನ್ನ ಹೆಸರು ಗೋವಿಂದ ಕಾರಜೋಳ ಅಲ್ಲ’ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರೂ ಹೇಳಿದ್ದಾರೆ. ಚುನಾವಣೆಯ ಕಾವು ಇನ್ನಷ್ಟು ಏರುವವರೆಗೆ ಕಾಲಹರಣ ಮಾಡದೆ ಎಷ್ಟು ಸಾಧ್ಯವೋ ಅಷ್ಟು ಬೇಗ ಕಾಮಗಾರಿಯನ್ನು ಆರಂಭಿಸಬೇಕು. ಯಾವುದೇ ಯೋಜನೆಯ ಅನುಷ್ಠಾನದಲ್ಲಿ ವಿಳಂಬವಾದಾಗಲೂ ಯೋಜನಾ ವೆಚ್ಚ ಹಲವು ಪಟ್ಟು ಹೆಚ್ಚಿ ಸಾರ್ವಜನಿಕ ಹಣ ಪೋಲಾಗುತ್ತದೆ ಎಂಬುದನ್ನು ನೆನಪಿಡಬೇಕು.