ಮಹದಾಯಿ ಯೋಜನೆಯ ಡಿಪಿಆರ್‌ಗೆ ಕೇಂದ್ರ ಜಲ ಆಯೋಗ ಒಪ್ಪಿಗೆ ನೀಡಿದ ಬೆನ್ನ ರಾಜಕಾರಣದ ರಂಗುರಂಗು ಆರಂಭ ವಾಗಿದೆ. ಬಿಜೆಪಿ ತಮ್ಮ ಸರಕಾರ ಯೋಜನೆಗೆ ಎಷ್ಟೊಂದು ಬದ್ಧವಾಗಿದೆ ಎಂದು ಬೀಗಿದರೆ, ಕಾಂಗ್ರೆಸ್ ಯೋಜನೆ ಜಾರಿಗೆ ಯಾವುದೇ ಅಧಿಕೃತ ತೀರ್ಮಾನ ತೆಗೆದುಕೊಳ್ಳದೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ನಾಟಕ ಮಾಡುತ್ತಿದೆ ಎಂದು ಟೀಕಿಸಿದೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಮಾಡಿದರೆ, ಬಿಜೆಪಿ ನಾಯಕರು ತಮ್ಮ ಸರಕಾರ ಯೋಜನೆ ಜಾರಿಗೆ ತಂದಿರುವ ಕುರಿತು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಇಷ್ಟೆಲ್ಲ ಬೆಳವಣಿಗೆಯ ನಡುವೆ ಗೋವಾದಲ್ಲಿರುವ ಬಿಜೆಪಿ ನೇತೃತ್ವದ ಸರಕಾರ ಯೋಜನೆಯ ವಿರುದ್ಧವೇ ಸಹಿ ಸಂಗ್ರಹ ಕಾರ್ಯದಲ್ಲಿ ತೊಡಗಿರುವುದು ಎಲ್ಲ ಪಕ್ಷಗಳಿಗೂ ಇದೊಂದು ಚುನಾವಣೆಯ ವಸ್ತು ಎಂಬುದನ್ನು ಸಾರಿದಂತಾಗುತ್ತಿದೆ.
ಗೋವಾದ ಆಡಳಿತಾರೂಢ ಬಿಜೆಪಿ ಸರಕಾರವು ಯೋಜನೆಯ ವಿರುದ್ಧ ರಾಜ್ಯದಾದ್ಯಂತ ಸಹಿ ಸಂಗ್ರಹ ಅಭಿಯಾನ ಪ್ರಾರಂಭಿ ಸಲು ಮುಂದಾಗಿದೆ. ಮಹದಾಯಿಯನ್ನು ರಕ್ಷಿಸುವ ಸಲುವಾಗಿ ಸಹಿ ಸಂಗ್ರಹ ಅಭಿಯಾನ ಮಾಡಲಾಗುವುದು. ಡಿಪಿಆರ್‌ಗೆ ಒಪ್ಪಿಗೆ ಸಿಕ್ಕಿರುವ ಬಗ್ಗೆ ರಾಜ್ಯದ ಜನರು ಆಕ್ರೋಶಗೊಂಡಿದ್ದಾರೆ. ಇದು ಒಂದು ಏಪಕ್ಷೀಯ ನಿರ್ಧಾರ. ಇದರಿಂದ ಗೋವಾಕ್ಕೆ ಅನ್ಯಾಯವಾಗಲಿದೆ ಎಂದು ಅಲ್ಲಿನ ಸಚಿವರು ಹೇಳಿಕೊಂಡಿದ್ದಾರೆ.
ಯೋಜನೆಗೆ ನೀಡಿರುವ ಒಪ್ಪಿಗೆ ಹಿಂಪಡೆಯಬೇಕು ಎಂದು ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ನಿರ್ಣಯ ಕಳುಹಿಸಿಕೊಡಲು ತೀರ್ಮಾನಿಸಿದ್ದಾರೆ. ಯಾವುದೇ ಸರಕಾರ ಅಧಿಕಾರ ದಲ್ಲಿರಲಿ, ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದಾಗ ಯೋಜನೆಯ ಪರವಾಗಿದ್ದರೆ, ನೆರೆ ರಾಜ್ಯದಲ್ಲಿ ಅದೇ ಪಕ್ಷದ ಸರಕಾರ ಅಸ್ತಿತ್ವ ದಲ್ಲಿದ್ದರೂ, ಅಲ್ಲಿನ ಜನರ ಪರವಾಗಿಯೇ ಮಾತನ್ನಾಡುತ್ತದೆ. ಆದರೆ, ಎಲ್ಲವೂ ಕಾನೂನಿನ ವ್ಯಾಪ್ತಿಯಲ್ಲಿಯೇ ನಡೆಯ ಬೇಕಾಗುತ್ತದೆ.
ಈ ನಡುವೆ ಚುನಾವಣೆ ಹತ್ತಿರವಾಗಿಸಿಕೊಂಡು, ಎರಡು ರಾಜ್ಯಗಳ ರಾಜಕಾರಣಿಗಳು ಜನರ ದಾರಿತಪ್ಪಿಸುವ ಪ್ರಯತ್ನ ನಡೆಸುವುದು ವಾಡಿಕೆಯಾಗಿದೆ. ಪದೇ ಪದೇ ಇಂತಹದ್ದೆ ಪ್ರಯತ್ನ ಮಾಡುವ ಬದಲು ಯೋಜನೆಯ ಸಾಧಕ ಬಾಧಕಗಳನ್ನು ವೈಜ್ಞಾನಿಕವಾಗಿ ಪರಾಮರ್ಶಿಸಿ ತೀರ್ಮಾನ ಕೈಗೊಳ್ಳಬೇಕು. ಅದನ್ನು ಬಿಟ್ಟು ಜನರನ್ನು ದಾರಿ ತಪ್ಪಿಸಿ, ಅಲ್ಲೊಂದು ಇಲ್ಲೊಂದು ರೀತಿಯ ನಾಟಕ ಮಾಡುವುದನ್ನು ಎಲ್ಲ ಪಕ್ಷದ ರಾಜಕೀಯ ನಾಯಕರು ಬಿಡಬೇಕು.
ರಾಜ್ಯದ ಹಿತದೃಷ್ಟಿಯಿಂದ ಎಲ್ಲ ಪಕ್ಷಗಳು, ನಾಯಕರು ಒಂದಾಗಿ ಹೋರಾಟ ಮಾಡಿ, ನ್ಯಾಯ ದೊರಕುವಂತೆ ಮಾಡಬೇಕು. ಅದನ್ನು ಬಿಟ್ಟು ಮತಗಳಿಕೆಯ ಲಾಭಕ್ಕಾಗಿ ಪರಸ್ಪರ ಆರೋಪ ಮಾಡುತ್ತಾ ಕಾಲ ಕಳೆದು, ನೆರೆ ರಾಜ್ಯದವರ ಎದುರು ನಗೆಪಾಟಲಿಗೀಡಾಗ ಬಾರದು. ಈ ನಿಟ್ಟಿನಲ್ಲಿ ರಾಜಕಾರಣಿಗಳು ಪರಾಮರ್ಶೆ ಮಾಡಿಕೊಳ್ಳಬೇಕು.