Tuesday, 17th September 2024

ಅನಾಗರಿಕ ಹಿಂಸಾಚಾರ

ಮಣಿಪುರದಲ್ಲಿ ಕಳೆದ ಆರು ತಿಂಗಳ ಹಿಂದೆ ಆರಂಭವಾದ ಹಿಂಸಾಚಾರ ಇನ್ನೂ ಕೊನೆ ಕಾಣುತ್ತಿಲ್ಲ. ಯಾವ ರೀತಿಯಲ್ಲೂ ನಿಯಂತ್ರಣಕ್ಕೆ ಬರುತ್ತಿಲ್ಲ. ಎರಡು ಸುಮದಾಯಗಳ ನಡುವಿನ ಸಂಘರ್ಷ ಮೀತಿ ಮೀರಿದ್ದು, ಜನಾಂಗೀಯ ವೈಷಮ್ಯ ಇಡೀ ರಾಜ್ಯದ ಜನಜೀವನ, ಭದ್ರತೆಗೆ ಧಕ್ಕೆ ತಂದಿದೆ. ಬುಧವಾರವಷ್ಟೇ ಬೆಳಕಿಗೆ ಬಂದಿರುವ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಹಾಗೂ ಸಾಮೂಹಿಕ ಅತ್ಯಾಚಾರ ಘಟನೆ ಯಾವುದೇ ನಾಗರಿಕ ಸಮುದಾಯ ತಲೆ ತಗ್ಗಿಸಲೇ ಬೇಕಾದ ವಿಚಾರ.

ಬಹುಸಂಖ್ಯಾತ ಮೈತೇಯಿ ಸಮುದಾಯ ಮತ್ತು ಬುಡಕಟ್ಟು ಕುಕಿಗಳ ನಡುವಿನ ಜನಾಂಗೀಯ ಘರ್ಷಣೆಯಿಂದಾಗಿ ಇಡೀ ರಾಜ್ಯ ಹೊತ್ತಿ ಉರಿಯುತ್ತಲೇ ಇದೆ. ಪರಿಶಿಷ್ಟ ಪಂಗಡದ ಸ್ಥಾನಮಾನಕ್ಕಾಗಿ ಮುಂದಿಟ್ಟ ಬೇಡಿಕೆಯನ್ನು ವಿರೋಧಿಸಿ ರಾಜ್ಯದ ಗುಡ್ಡ ಗಾಡು ಜಿಲ್ಲೆಗಳಲ್ಲಿ ಬುಡಕಟ್ಟು ಸಂಘಟನೆಯ ಮೆರವಣಿಗೆ’ ನಡೆದ ನಂತರ ಆರಂಭ ವಾದ ಉದ್ವಿಗ್ನತೆ ಬೆಳೆಯುತ್ತಲೇ ಹೋಗಿದೆ.

ಇಲ್ಲಿಯವರೆಗೆ, ಹಿಂಸಾಚಾರದಲ್ಲಿ ೧೦೦ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ನೂರಾರು ಜನರು ನಿರಾಶ್ರಿತರಾಗಿದ್ದಾರೆ. ಸಾಕಷ್ಟು ಪ್ರಮಾಣದಲ್ಲಿ ಅರೆಸೈನಿಕ ಪಡೆಗಳು ರಾಜ್ಯದಲ್ಲಿ ಬೀಡುಬಿಟ್ಟಿರುವುದರ ನಡುವೆಯೇ ರಾಜಕೀಯ ನಾಯಕರ ಮನೆಗಳನ್ನು ಸುಟ್ಟುಹಾಕುವುದು, ವ್ಯಾಪಕ ಲೂಟಿ ಮತ್ತು ದೌರ್ಜನ್ಯ ದಂಥ ಹಿಂಸಾಚಾರಗಳು ನಡೆಯುತ್ತಲೇ ಇವೆ.

ಪ್ರಕ್ಷುಬ್ಧ ಸನ್ನಿವೇಶದ ನಡುವೆ ಸಾಮಾನ್ಯರು ನಿತ್ಯ ಆತಂಕದಲ್ಲೇ ಬದುಕು ದೂಡುವಂತಾಗಿದೆ. ಇದೇ ವಿಚಾರದಲ್ಲಿ ಆಡಳಿತಾ ರೂಢರು, ಪ್ರತಿಪಕ್ಷಗಳ ನಡುವೆ ಪರಸ್ಪರ ಕೆಸರೆರಚಾಟ ಮುಂದುವರಿದೆಯೇ ಹೊರತು ರಾಜ್ಯದಲ್ಲಿ ಶಾಂತಿ ಸ್ಥಾಪನೆ ಹಾಗೂ ಪರಸ್ಪರ ಸಾಮರಸ್ಯ ಮೂಡಿಸಲು ಸಂಘಟಿತ ಪ್ರಯತ್ನಗಳಾಗದಿರುವುದು ಕಳವಳಕಾರಿ ಸಂಗತಿ. ಏತನ್ಮಧ್ಯೆ ಹಿಂಸಾಚಾರದ ಹಿಂದೆ ವಿದೇಶಿ ಕೈವಾಡದ ಶಂಕೆಯೂ ವ್ಯಕ್ತವಾಗಿದೆ. ಸ್ವತಃ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭೇಟಿ, ಶಾಂತಿ ಸಮಿತಿ ರಚನೆಯ ಪ್ರಯತ್ನದಂಥ ಕ್ರಮಗಳ ಹೊರತಾಗಿಯೂ, ಸಾಮಾನ್ಯ ಸ್ಥಿತಿಯು ರಾಜ್ಯದಿಂದ ವಂಚಿತವಾಗಿರುವುದು ಕಳವಳಕಾರಿ.

ಇದೇ ವಿಚಾರ ಐರೋಪ್ಯ ಒಕ್ಕೂಟದ ಸಂಸತ್‌ನಲ್ಲೂ ಪ್ರಸ್ತಾಪವಾಗುತ್ತಿದೆ ಎಂದರೆ ಜಾಗತಿಕ ಮಟ್ಟದಲ್ಲಿ ಪ್ರಬಲ ಶಕ್ತಿಯೊಂದರ ಪಿತೂರಿಯನ್ನೂ ಅಲ್ಲಗಳೆಯಲಾಗುತ್ತಿಲ್ಲ. ಇದೇ ಶಕ್ತಿ ಪರಸ್ಪರ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಅಡ್ಡಿಯಾಗುತ್ತಿರುವ ಬಲವಾದ ಸಂಶಯ ಎದ್ದಿದೆ. ಎಲ್ಲ ವಿಚಾರ ಗಳಿಂದಾಚೆಗೆ ಮಾನವೀಯತೆ ಅತ್ಯಂತ ಅಗತ್ಯ ಮತ್ತು ಮಹತ್ವದ್ದು. ಅದಿಲ್ಲ ದಿದ್ದರೆ ಎಲ್ಲ ಅಭಿವೃದ್ಧಿಗಳು ಅರ್ಥಹೀನವೆನಿಸಿ, ಮೃಗಗಳ ಸಾಮ್ರಾಜ್ಯ ಭೂಮಿಯ ಮೇಲೆ ನಿರ್ಮಾಣವಾದೀತು.

Leave a Reply

Your email address will not be published. Required fields are marked *