ಹಲವು ಇಲಾಖೆಗಳನ್ನು ವಿಲೀನಗೊಳಿಸುವ ಹಾಗೂ ಅನುಪಯುಕ್ತ ನಿಗಮ, ಮಂಡಳಿಗಳನ್ನು ರದ್ದುಗೊಳಿಸುವ ಮೂಲಕ ಎರಡು ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ರದ್ದು ಮಾಡುವ ತೀರ್ಮಾನವನ್ನು ಕಂದಾಯ ಸಚಿವರ ನೇತೃತ್ವದ ಸಂಪುಟ ಉಪಸಮಿತಿ ಕೈಗೊಂಡಿರುವುದು ಸ್ವಾಗತಾರ್ಹವಾಗಿದೆ.
ಪ್ರಸ್ತುತ ಒಂದೇ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ಇಲಾಖೆಗಳು ಹಾಗೂ ನಿಗಮ, ಮಂಡಳಿಗಳು ಕಾರ್ಯನಿರ್ವಹಿಸುತ್ತಿರುವುದು ಆರ್ಥಿಕವಾಗಿ ಮತ್ತು ಆಡಳಿತಾತ್ಮಕವಾಗಿ ಹೆಚ್ಚು ಹೊರೆಯಾಗಿದೆ. ಇದಕ್ಕೆ ಬದಲಾಗಿ ಒಂದೇ ಕ್ಷೇತ್ರಕ್ಕೆ ಸಂಬಂಧಿಸಿದ ಇಲಾಖೆಗಳು ಹಾಗೂ ನಿಗಮ, ಮಂಡಳಿಗಳನ್ನು ಮಾತೃ ಇಲಾಖೆಯೊಂದಿಗೆ ವಿಲೀನಗೊಳಿಸುವ ಮೂಲಕ ಇಲಾಖೆಯಲ್ಲಿ ಆಡಳಿತಾತ್ಮಕ ದಕ್ಷತೆಯನ್ನು ಹೆಚ್ಚಿಸಿ ಆರ್ಥಿಕ ಹೊರೆಯನ್ನು ಕಡಿಮೆ ಮಾಡಬಹುದು. ಇಲಾಖೆಗಳಿಗೆ ಹೊಸ ರೂಪವನ್ನು ನೀಡಿ ರಚನಾತ್ಮಕ ವಾದ ಬದಲಾವಣೆಯನ್ನು ಮಾಡಬಹುದು. ಆದರೆ ಭಿನ್ನ ವಿದ್ಯಾರ್ಹತೆ, ತರಬೇತಿ ಪಡೆದ ಸಿಬ್ಬಂದಿಯಲ್ಲಿ ಸಮನ್ವಯ ಸಾಧಿಸುವ ಸವಾಲು ಎದುರಾಗಿದೆ.
ಅರಣ್ಯ ಇಲಾಖೆಗೆ ಸೇರಬೇಕಾದ ವ್ಯಕ್ತಿಯು ಪಡೆದ ವಿದ್ಯಾರ್ಹತೆ, ತರಬೇತಿ ಬೇರೆ ತರಹದ್ದಿ ದ್ದರೆ, ಕೃಷಿ ಇಲಾಖೆಗೆ ಸೇರಬೇಕಾದ ವ್ಯಕ್ತಿಯ ವಿದ್ಯಾರ್ಹತೆ, ತರಬೇತಿ ಬೇರೆ ತರಹದ್ದೇ ಇರುತ್ತದೆ. ಅಲ್ಲದೆ, ಈಗಾಗಲೇ ಒಂದು ಇಲಾಖೆಯಲ್ಲಿ ಕೆಲಸ ಮಾಡಿದ ಅಧಿಕಾರಿಗೆ ಮತ್ತೊಂದು ಇಲಾಖೆಯಲ್ಲಿ ಇದ್ದಕ್ಕಿದ್ದಂತೆ ಕಾರ್ಯನಿರ್ವಹಿಸುವುದಕ್ಕೆ ಕಷ್ಟವಾಗಬಹುದು. ಆ ಹಿನ್ನೆಲೆಯಲ್ಲಿ ಮತ್ತೊಮ್ಮೆ ತರಬೇತಿ ಹಮ್ಮಿಕೊಳ್ಳುವ ಅಗತ್ಯವೂ ಇದೆ.
ಅಲ್ಲದೆ, ಇನ್ಮುಂದೆ ಉನ್ನತ ಅಧಿಕಾರಿಗಳ ನೇಮಕವಾಗುವುದಕ್ಕಿಂತ -ರೆ ಗಾರ್ಡ್, ನರ್ಸರಿ ಅಸಿಸ್ಟೆಂಟ್ ಅಂತಹವರನ್ನು ಅಗತ್ಯ ಸಂಖ್ಯೆಯಲ್ಲಿ ನೇಮಕ ಮಾಡಬೇಕಿದೆ. ಒಟ್ಟಿನಲ್ಲಿ ಈ ಸುಧಾರಣಾ ಪ್ರಕ್ರಿಯೆಯು ಹುದ್ದೆ ರದ್ದು, ಖರ್ಚು ತಗ್ಗಿಸುವುದು ವುಗಳನ್ನಷ್ಟೇ ಪರಿಗಣಿಸದೆ, ಮುಂದಿನ ಹತ್ತು ವರ್ಷಗಳಲ್ಲಿ ರೈತ ಸಮುದಾಯಕ್ಕೆ ಯಾವ ಬಗೆಯ ನೆರವು ಬೇಕಾಗಬಹುದು ಎಂಬ ದೃಷ್ಟಿಯಲ್ಲಿ ನೋಡಬೇಕು. ಸರಕಾರದ ಆದಾಯದಲ್ಲಿ ಶೇ.೫೨ರಷ್ಟು ಹಣ ಅಧಿಕಾರಿ-ನೌಕರರ ಸಂಬಳ, ಸಾರಿಗೆ, ಭತ್ಯೆ ಇತರ ವೆಚ್ಚಕ್ಕೆ ಬಳಕೆಯಾಗುತ್ತಿತ್ತು. ಇನ್ಮುಂದೆ ೨ ಸಾವಿರ ನೌಕರರ ಉಳಿತಾಯದ ಹಣವನ್ನು ಅಭಿವೃದ್ಧಿ ಯೋಜನೆಗಳಿಗೆ ಬಳಿಸಿಕೊಳ್ಳ ಬೇಕು.