ಬೆಂಗಳೂರಿನ ರಾಷ್ಟ್ರೀಯ ಮಿಲಿಟರಿ ಸ್ಕೂಲ್ ಕ್ಯಾಂಪ್‌ನಲ್ಲಿ ಲೋಯರ್ ಡಿವಿಷನ್ ಕ್ಲರ್ಕ್ ಹುದ್ದೆಗೆ ನಡೆದಿದ್ದ ಪರೀಕ್ಷೆಗೆ ನಕಲಿ
ಅಭ್ಯರ್ಥಿಗಳನ್ನು ಕಳುಹಿಸಿದ್ದ ಇಬ್ಬರನ್ನು ಅಶೋಕನಗರ ಠಾಣಾ ಪೊಲೀಸರು ಬಂಧಿಸಿರುವುದು ಶ್ಲಾಘನೀಯ ಬೆಳವಣಿಗೆ. ಪರೀಕ್ಷೆಯ ಎರಡು ವಿಭಿನ್ನ ಘಟ್ಟಗಳಲ್ಲಿ ಪಡೆಯಲಾಗಿದ್ದ ಬೆರಳಚ್ಚುಗಳ ಮಾದರಿಯಲ್ಲಿ ಹೊಂದಿಕೆಯಾಗದ ಕಾರಣ ಅನುಮಾನಗೊಂಡ ಮಿಲಿಟರಿ ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸಿದಾಗ ಆರೋಪಿಗಳ ಈ ವಂಚನೆ ಬಯಲಾಗಿದೆ ಎಂಬುದು ಲಭ್ಯ ಮಾಹಿತಿ.
ಪ್ರಶ್ನೆಪತ್ರಿಕೆ ಸೋರಿಕೆ, ಸಂದರ್ಶನದ ವೇಳೆ ಪ್ರಭಾವ ಬೀರುವಿಕೆ, ಲಂಚಗುಳಿತನ ಹೀಗೆ ನಮ್ಮ ವ್ಯವಸ್ಥೆಯ ವಿವಿಧ ಸ್ತರಗಳ ಪರೀಕ್ಷಾ ಚೌಕಟ್ಟಿನೊಳಗೆ ಒಂದಿಷ್ಟು ಅಪಸವ್ಯದ ಅಂಶಗಳೂ ತೂರಿಕೊಂಡಿರುವುದನ್ನು ಬಿಡಿಸಿ ಹೇಳಬೇಕಿಲ್ಲ. ಆದರೆ ಮಿಲಿಟರಿ ವ್ಯವಸ್ಥೆಯೊಳಗೂ ಇಂಥ ದುಸ್ಸಾಹಸಕ್ಕೆ ಮುಂದಾಗಿರುವವರಿಗೆ ಏನೆನ್ನುವುದು? ಇಂಥವರ ಧಾರ್ಷ್ಟ್ಯಕ್ಕೆ ಕಠಿಣ
ಕ್ರಮ ಞವನ್ನು ಕೈಗೊಂಡು ಸರಿಯಾಗಿ ಪಾಠ ಕಲಿಸದಿದ್ದರೆ, ಇಂಥ ಹೆಗ್ಗಣಗಳು ಎಲ್ಲೆಂದರಲ್ಲಿ ಬಿಲ ತೋಡಿದರೆ ಅಚ್ಚರಿಯಿಲ್ಲ. ಹೀಗೆ ವಾಮಮಾರ್ಗದಲ್ಲಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಉದ್ಯೋಗವನ್ನೂ ಗಿಟ್ಟಿಸಿಕೊಳ್ಳುವವರು ಅದಿನ್ಯಾವ ಪರಿಯಲ್ಲಿ ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸಿಯಾರು ಮತ್ತು ಮುಂದಿನ ಪೀಳಿಗೆಗೆ ಮೇಲ್ಪಂಕ್ತಿ ಆಗಿಯಾರು? ಉದ್ಯೋಗಾಕಾಂಕ್ಷಿಗಳ ಪೈಕಿ ಇರುವ ಗಟ್ಟಿಕಾಳು ಮತ್ತು ಜೊಳ್ಳುಕಾಳುಗಳನ್ನು ಪ್ರತ್ಯೇಕಿಸಿ, ನೌಕರಿಗೆಂದು ಹೆಕ್ಕಿ ತೆಗೆದುಕೊಳ್ಳುವುದಕ್ಕಿರುವ ಕಾರ್ಯ ವಿಧಾನವೇ ಇಂಥ ಪರೀಕ್ಷಾ ಪ್ರಕ್ರಿಯೆಯಾಗಿರುತ್ತದೆ.
ಇದನ್ನು ಎಲ್ಲ ರೀತಿಯಲ್ಲೂ ಬಂದೋಬಸ್ತ್ ಮಾಡುವ ಮೂಲಕ, ಯಾವುದೇ ರೀತಿಯ ತಪ್ಪು ಎಸಗುವುದಕ್ಕೆ ಆಸ್ಪದವಿಲ್ಲದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಆಳುಗರದ್ದು. ಇಲ್ಲವಾದಲ್ಲಿ ಇಂಥ ವಾಮಮಾರ್ಗಿಗಳು ಸಮಾಜದ ವಿವಿಧ ಕಾರ್ಯಕ್ಷೇತ್ರಗ ಳಲ್ಲಿ ತೂರಿಕೊಂಡು ವ್ಯವಸ್ಥೆಯನ್ನು ಇನ್ನಷ್ಟು ಹದಗೆಡಿಸುವುದರಲ್ಲಿ ಸಂದೇಹವಿಲ್ಲ. ಇಂಥ ಕುತ್ಸಿತ ಚಿಂತನೆಯ ಅಭ್ಯರ್ಥಿ ಗಳಿಂದಾಗಿ, ರಾತ್ರಿಯೆಲ್ಲ ನಿದ್ರೆಗೆಟ್ಟು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ಪ್ರಾಮಾ ಕ ಮತ್ತು ಪರಿಶ್ರಮಿ ಅಭ್ಯರ್ಥಿಗಳಿಗೂ
ಅನ್ಯಾಯವಾಗುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಆದ್ದರಿಂದ, ಪರೀಕ್ಷಾ ವ್ಯವಸ್ಥೆಯಲ್ಲಿನ ಯಾವುದೇ ಪಾರುಗಂಡಿ ಯನ್ನು ಗುರುತಿಸಿ, ಅದನ್ನು ಮುಚ್ಚಬೇಕಿರುವುದು ಈ ಕ್ಷಣದ ಅನಿವಾರ್ಯತೆ.