Wednesday, 9th October 2024

ಹಾಲಿಗೆ ಪ್ರೋತ್ಸಾಹ ಧನ ಬಿಡುಗಡೆಗೊಳಿಸಿ

ರಾಜ್ಯದಲ್ಲಿ ೯ ಲಕ್ಷಕ್ಕಿಂತ ಅಧಿಕ ಉತ್ಪಾದಕರು ನಿತ್ಯ ೮೪ ಲಕ್ಷ ಲೀಟರ್ ಹಾಲನ್ನು ಡೇರಿ ಗಳಿಗೆ ಹಾಕುತ್ತಿದ್ದಾರೆ. ಪ್ರತಿ ಲೀಟರ್ ಹಾಲಿಗೆ ಸರಕಾರ ೫ ರು. ಪ್ರೋತ್ಸಾಹ ಧನ ನೀಡು ತ್ತದೆ.

ಆದರೆ, ಕಳೆದ ಏಳೆಂಟು ತಿಂಗಳಿಂದ ಪ್ರೋತ್ಸಾಹ ಧನ ಬಿಡುಗಡೆ ಯಾಗ ದಿರುವುದರಿಂದ ಹಾಲು ಉತ್ಪಾದಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಹೈನುಗಾರಿಕೆಯನ್ನೇ ನಂಬಿ ಜೀವನ ನಡೆಸುವ ಲಕ್ಷಾಂತರ ಕುಟುಂಬಗಳು ಆರ್ಥಿಕವಾಗಿ ಕುಗ್ಗಿ ಹೋಗಿದ್ದಾರೆ.

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಾರ್ಚ್ ಹಾಗೂ ಇನ್ನು ಕೆಲವು ಜಿಗಳಲ್ಲಿ ಮೇ ದಿಂದ ಹಣ ಜಮೆ ಆಗಿಲ್ಲ. ಕೆಎಂಎಫ್ ಅಂದಾಜು 1450 ಕೋಟಿ ರು. ಗಿಂತ ಅಧಿಕ ಪ್ರೋತ್ಸಾಹ ಧನವನ್ನು ರೈತರ ಖಾತೆಗಳಿಗೆ ಬಿಡುಗಡೆ ಮಾಡಬೇಕಿದೆ. ಆದರೆ, ಸರಕಾರ ಹಣ ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿದೆ. ಇಂದಿನ ಹೈನುಗಾರಿಕೆ ಕೇವಲ ಮೇವನ್ನು ನಂಬು ವಂತಿಲ್ಲ. ಜಾನುವಾರುಗಳಿಗೆ ಮೇವಿನ ಜತೆಗೆ ಹಿಂಡಿ, ಬೂಸಾ ಹಾಕುವುದು ಅನಿವಾರ್ಯ ವಾಗಿದೆ.

ಸಾವಿರಾರು ರುಪಾಯಿ ಮೌಲ್ಯದ ಅವುಗಳನ್ನು ಕೊಂಡು ಜಾನುವಾರುಗಳಿಗೆ ಹಾಕಲು ರೈತರು ಅನಿವಾರ್ಯವಾಗಿ ಸಾಲದ ಮೊರೆ ಹೋಗಬೇಕಾಗಿದೆ. ಜಾನುವಾರುಗಳ ಸಾಕಾಣಿಕೆಗಾಗಿಯೇ ತಕ್ಷಣಕ್ಕೆ ಸಾಲ ಸಿಗುವ ಯಾವ ವ್ಯವಸ್ಥೆಯೂ ಇಲ್ಲವಾದ್ದರಿಂದ ಅನಿವಾರ್ಯವಾಗಿ ಕೈಸಾಲದ ಮೊರೆ ಹೋಗಬೇಕಾಗುತ್ತದೆ. ಆ ಸಾಲ ಬಡ್ಡಿ, ಚಕ್ರಬಡ್ಡಿ ಎಂದು ಬೆಳೆಯುತ್ತಲೇ ಹೋಗುತ್ತದೆ. ಆದ್ದರಿಂದ ಸರಕಾರ ಹಾಲಿಗೆ ನೀಡುವ ಪ್ರೋತ್ಸಾಹ ಧನವನ್ನು ಕೂಡಲೇ ಬಿಡುಗಡೆ ಮಾಡುವ ಮೂಲಕ ರೈತರ ನೆರವಿಗೆ ಧಾವಿಸ ಬೇಕಿದೆ.

ಅಲ್ಲದೆ, ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ರಾಜ್ಯದ ಬಹುತೇಕ ಭಾಗಗಳಲ್ಲಿ ಈಗಾಗಲೇ ಬೆಳೆಗಳು ಹಾಳಾಗಿವೆ. ಹೀಗಾಗಿ ರೈತರು ಹೈನುಗಾರಿಕೆಯನ್ನೇ ನಂಬಿ ಬದುಕುವಂತಾಗಿದೆ. ಇಂತಹ ಸಂದರ್ಭದಲ್ಲೇ ಜಾನುವಾರುಗಳಿಗೆ ಚರ್ಮಗಂಟು ರೋಗ ಬಂದು ವಕ್ಕರಿಸಿದೆ. ಅನೇಕ ರೈತರು ತಮ್ಮ ಜಾನುವಾರುಗಳನ್ನು ಕಳೆದುಕೊಂಡಿದ್ದಾರೆ. ಆದ್ದರಿಂದ ಸರಕಾರ ಜಾನುವಾರುಗಳ ರಕ್ಷಣೆಗೆ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು. ಹಾಲಿಗೆ ನೀಡುವ ಪ್ರೋತ್ಸಾಹ ಧನವನ್ನೂ ಇನ್ನಷ್ಟು ಹೆಚ್ಚಿಸಬೇಕಿದೆ.