Sunday, 15th December 2024

ರೈತರ ಹಾಲಿಗೆ ದರ ಕಡಿತ ಸರಿಯಲ್ಲ

ರಾಜ್ಯದಲ್ಲಿ ಭೀಕರ ಬರ ಆವರಿಸಿರುವ ಹಿನ್ನೆಲೆಯಲ್ಲಿ ರೈತಾಪಿ ವರ್ಗ ತೀರಾ ಸಂಕಷ್ಟಕ್ಕೆ ಸಿಲುಕಿದೆ. ಈ ಪರಿಸ್ಥಿತಿಯಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗುತ್ತಿದೆ. ಈ ಕಾರಣ ರೈತರ ಪ್ರತಿ ಲೀಟರ್ ಹಾಲಿಗೆ ಸರಕಾರ ೩ ರು. ಪ್ರೋತ್ಸಾಹ ಧನ ನೀಡುತ್ತಿದೆ. ಆದರೆ ಇಂತಹ ಸಮಯದಲ್ಲಿ ರೈತರ ಬಗ್ಗೆ ಕಾಳಜಿ ತೋರಿಸಬೇಕಿದ್ದ ಹಾಲು ಒಕ್ಕೂಟ ಸಂಸ್ಥೆಗಳು ಪ್ರತಿ ಲೀಟರ್ ಹಾಲಿನ ದರದಲ್ಲಿ ೨ ರು. ಕಡಿತಗೊಳಿಸಲು ಮುಂದಾಗಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ.

ಬರಗಾಲದ ಪರಿಸ್ಥಿತಿಯಲ್ಲಿ ಜಾನುವಾರುಗಳನ್ನು ಸಾಕುವುದು ರೈತರಿಗೆ ಕಷ್ಟವಾಗುತ್ತಿದೆ. ಜಾನುವಾರುಗಳಿಗೆ ಹಸಿ ಮೇವಿನ ಮೇವಿನ ಕೊರತೆ ಇದ್ದುದರಿಂದ ಹಾಲಿನ ಇಳುವರಿ ಕುಂಠಿತಗೊಂಡಿದೆ. ಪಶು ಆಹಾರದ ಬೆಲೆಯೂ ಗಣನೀಯವಾಗಿ ಹೆಚ್ಚಳ ವಾಗಿದೆ. ಹೀಗಾಗಿಯೇ ಸರಕಾರ ಪ್ರೋತ್ಸಾಹ ಧನ ಸಹ ಹೆಚ್ಚಿಸಿದೆ. ಆದರೆ ಒಂದು ೩ ರು. ಕೊಟ್ಟು ಇನ್ನೊಂದು ಕಡೆ ೨ ರು. ಕಿತ್ತುಕೊಳ್ಳುವುದು ಸರಿಯಲ್ಲ. ಹಾಲು ಒಕ್ಕೂಟಗಳು ಹಾಗೂ ಪಶು ಸಂಗೋಪನೆ ಇಲಾಖೆಯು ರಾಸುಗಳ ನಿರ್ವಹಣೆ, ಹಾಲು ಉತ್ಪಾದನಾ ವೆಚ್ಚವನ್ನು ಗಣನೆಗೆ ತೆಗೆದು ಕೊಂಡು ರೈತರು ಪೂರೈಸುವ ಹಾಲಿಗೆ ವೈeನಿಕ ಬೆಲೆ ನಿಗದಿ ಮಾಡಬೇಕಿದೆ.

ಕೂಡಲೇ ಸರಕಾರ ಮಧ್ಯಸ್ಥಿಕೆ ವಹಿಸಿ ರೈತರ ಹಾಲಿನ ದರ ಕಡಿತ ಮಾಡುವುದನ್ನು ತಪ್ಪಿಸಬೇಕು. ಅಲ್ಲದೆ, ಪಶು ಆಹಾರ ಬೆಲೆ ಏರಿಕೆ ನಿಯಂತ್ರಿಸಬೇಕು. ಪಶು ಆಹಾರಕ್ಕಾಗಿ ರಾಜ್ಯ ಸರಕಾರ ಹೆಚ್ಚಿನ ಸಬ್ಸಿಡಿಯನ್ನು ನೀಡಬೇಕು. ಬರಗಾಲದ ಹಿನ್ನೆಲೆಯಲ್ಲಿ ಪಶು ಆಹಾರದ ವಿತರಣೆಯ ಪ್ರಮಾಣವನ್ನು ಹೆಚ್ಚಿಸಬೇಕು. ಪಶುಗಳನ್ನು ಕೊಂಡುಕೊಳ್ಳಲು ಅಗತ್ಯವಿರುವ ಬ್ಯಾಂಕ್ ಸಾಲಗಳು ಕಡಿಮೆ ಬಡ್ಡಿಯೊಂದಿಗೆ ಸರಳವಾಗಿ ಸಿಗಬೇಕು. ವಿಮೆ, ಆರೋಗ್ಯ ಸೇವೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಗುಜರಾತಿನ ಅಮೂಲ್ ಮಾದರಿಯಲ್ಲಿ ಬೆಣ್ಣೆ, ತುಪ್ಪ, ಸಿಹಿತಿಂಡಿ ಇತ್ಯಾದಿ ವಿವಿಧ ರೀತಿಯ ಹಾಲಿನ ಉತ್ಪನ್ನಗಳನ್ನು ತಯಾರಿಸಲು ಅಗತ್ಯವಿರುವ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹಣ ನೀಡಬೇಕು. ರೈತರ ಕುಟುಂಬಗಳ ಜೀವನಾಧಾರ ವಾಗಿರುವ ಹೈನುಗಾರಿಕೆಯನ್ನು ಪ್ರೋತ್ಸಾಹಿಸಬೇಕು.