ಕಳದ ಒಂದು ವರ್ಷದಲ್ಲಿ ರಾಜ್ಯದಲ್ಲಿ ಹೈನುಗಾರಿಕೆ ತೊರೆಯುವವರ ಸಂಖ್ಯೆ ಹೆಚ್ಚಾಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ. ಅದಕ್ಕೆ ಕಾರಣ
ದುಬಾರಿ ಪಶು ಆಹಾರ, ಚರ್ಮಗಂಟು ರೋಗ ಸೇರಿದಂತೆ ಮತ್ತಿತರ ಕಾರಣಗಳನ್ನು ಕೊಡಲಾಗಿದೆ. ಇಂದು ಹೈನುಗಾರಿಕೆಯು ಬರೀ ರೈತರ ಆದಾಯದ ಮೂಲವಾಗಿ ಉಳಿದಿಲ್ಲ.
ಅನೇಕ ಹಾಲು ಉತ್ಪಾದಕ ಘಟಕಗಳೂ ಹೈನುಗಾರಿಕೆಯನ್ನೇ ನಂಬಿವೆ. ಹೀಗಾಗಿ ಹಾಲು ಉತ್ಪಾದಕ ಸಂಘಗಳಲ್ಲಿ ದುಡಿಯುತ್ತಿರುವ ಸಾವಿರಾರು ಸಿಬ್ಬಂದಿಯ ಜೀವನವೂ ಶೋಚನೀಯ ವಾಗಿದೆ. ಗ್ರಾಮೀಣ ಪ್ರದೇಶದ ಆರ್ಥಿಕತೆ ಹೈನುಗಾರಿಕೆಯ ಮೇಲೆ ಅವಲಂಬಿತವಾಗಿದ್ದು, ರೈತರು ವೃತ್ತಿ ಯಿಂದ ವಿಮುಖರಾದರೆ ರಾಜ್ಯದ ಆರ್ಥಿಕತೆಯ ಮೇಲೂ ಪೆಟ್ಟು ಬೀಳಲಿದೆ. ರಾಜ್ಯದಲ್ಲಿ ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಸಾಕಷ್ಟು ಯೋಜನೆಗಳು ಇದ್ದರೂ ಪರಿಣಾಮಕಾರಿಯಾಗಿ ಜಾರಿಯಾಗದ ಕಾರಣ ಹೈನುಗಾರಿಕೆಯತ್ತ ಒಲವು ಕಡಿಮೆಯಾಗಿದೆ.
ಆದ್ದರಿಂದ ಸರಕಾರ ಮತ್ತು ಹಾಲು ಒಕ್ಕೂಟ ಸಂಸ್ಥೆಗಳು ಈ ಹಿಂದೆ ಹೈನುಗಾರರಿಗೆ ನೀಡುತ್ತಿದ್ದ ಪ್ರೋತ್ಸಾಹಧನವನ್ನು ಮತ್ತೆ ಕೊಡಬೇಕು. ಮಿತಿ ಮೀರಿರುವ ಪಶು ಆಹಾರ ದರವನ್ನು ಕಡಿಮೆ ಗೊಳಿಸಿ ಗುಣಮಟ್ಟದ ಪಶು ಆಹಾರ ವಿತರಿಸಬೇಕು. ಯಶಸ್ವಿನಿ ಯೋಜನೆಯನ್ನು ಸಿಬ್ಬಂದಿ ಹಾಗೂ ಕುಟುಂಬದ ಸದಸ್ಯರಿಗೂ ವಿಸ್ತರಿಸಬೇಕು. ಚರ್ಮಗಂಟು ರೋಗ ಉಲ್ಬಣಗೊಂಡಿದ್ದು, ಹತೋಟಿಗೆ ತುರ್ತು ಕ್ರಮ ವಹಿಸಬೇಕು. ಮುಂದಿನ ಬಜೆಟ್‌ನಲ್ಲಿ ಹೈನುಗಾರರ ಸಂಕಷ್ಟಕ್ಕೆ ಸ್ಪಂದಿಸಿ ಪ್ರತಿ ಲೀಟರ್ ಹಾಲಿಗೆ ಕನಿಷ್ಠ ? ೫ ಪ್ರೋತ್ಸಾಹ ಧನ ಹಾಗೂ ನಂದಿನಿ ಪಶು ಆಹಾರ ಕೆ.ಜಿಗೆ ? ೫ ಸಬ್ಸಿಡಿ ನೀಡಲು ವಿಶೇಷ ಅನುದಾನ ಮೀಸಲಿಡಬೇಕು.
ಹೈನುಗಾರಿಕೆಗೆ ಪ್ರೋತ್ಸಾಹ ನೀಡುವುದಕ್ಕಾಗಿ ಅನೇಕ ಬಾರಿ ಹಾಲಿನ ದರ ಏರಿಸಲಾಗಿದೆ. ಹಾಲಿನ ದರ ಏರಿಸಿದರೆ ಗ್ರಾಹಕರ ಮೇಲೆ ಆರ್ಥಿಕ ಹೊರೆ ಬೀಳುತ್ತದೆ. ಬದಲಾಗಿ ಹೈನುಗಾರರಿಗೆ ಸರಕಾರವೇ ಸಬ್ಸಿಡಿ ನೀಡುವುದು ಉತ್ತಮ. ಇದರಿಂದ ರೈತರಿಗೂ ಲಾಭವಾಗಲಿದೆ, ಗ್ರಾಹಕರಿಗೂ ಅನುಕೂಲವಾಗಲಿದೆ. ಸರಕಾರ ಹೈನುಗಾರಿಕೆಗೆ ಉತ್ತೇಜನ ನೀಡಿದರೆ ಹೈನುಗಾರರ ಆರ್ಥಿಕ ಸಬಲೀಕರಣದ ಜತೆಗೆ ಆರ್ಥಿಕತೆಯೂ ಬಲಗೊಳ್ಳ ಲಿದೆ. ಫೆಬ್ರವರಿ ೧೦ರಂದು ವಿಧಾನಮಂಡಲದ ಪ್ರಸಕ್ತ ವರ್ಷದ ಬಜೆಟ್ ಅಽವೇಶನ ನಡೆಯಲಿದ್ದು, ಹೈನುಗಾರಿಕೆ ಪ್ರೋತ್ಸಾಹಕ್ಕೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಿದೆ.