Sunday, 15th December 2024

ಕಾನೂನಿನ ದುರ್ಬಳಕೆ ಆಗದಿರಲಿ

ದೇಶದೆಲ್ಲೆಡೆ ದಶಕಗಳಿಂದ ದ್ವೇಷ ರಾಜಕಾರಣದ ಮಾತುಗಳು ಕೇಳಿ ಬರುತ್ತಿದ್ದರೂ ಕರ್ನಾಟಕ ರಾಜಕೀಯ ಇದಕ್ಕೆ ಹೊರತಾಗಿದೆ ಎಂಬಂತಿತ್ತು. ಎಲ್ಲ ರಾಜ್ಯಗಳಂತೆ ನಮ್ಮಲ್ಲೂ ಆರೋಪ, ಪ್ರತ್ಯಾರೋಪಗಳು, ಟೀಕಾ ಪ್ರಹಾರಗಳಿದ್ದರೂ ನಾಯಕರು ಪರಸ್ಪರ ಎದುರಾದಾಗ ಕೈಕುಲುಕಿ ಮಾತನಾಡಿಸುವ ಕನಿಷ್ಠ ಸೌಜನ್ಯಕ್ಕೆ ಕೊರತೆ ಇರಲಿಲ್ಲ.

ಕೆಲವು ರಾಜ್ಯಗಳ ರಕ್ತರಂಜಿತ ರಾಜಕೀಯ ಚರಿತ್ರೆ, ಹಾಲಿ-ಮಾಜಿ ಮುಖ್ಯಮಂತ್ರಿಗಳು ಸರದಿ ಪ್ರಕಾರ ಜೈಲಿಗೆ ಹೋಗುವುದನ್ನು ಕಂಡಾಗ ಕರುನಾಡಿನ ರಾಜಕಾರಣದ ಬಗ್ಗೆ ಹೆಮ್ಮೆಯೆನಿಸುತಿತ್ತು. ಆದರೆ ಇದೀಗ ನಮ್ಮಲ್ಲೂ ದ್ವೇಷ ಮೊಳಕೆಯೊಡೆದು ಹೆಮ್ಮರವಾಗಿ ಬೆಳೆಯುವ ಲಕ್ಷಣಗಳು ಕಾಣುತ್ತಿವೆ. ಕಳೆದ ವಿಧಾನಸಭಾ ಚುನಾವಣೆಗೆ ಮೊದಲೇ ಲಯ ತಪ್ಪಿದ ನಾಯಕರ ಮಾತುಗಳು ಇದೀಗ ರಾಜಕಾರಣವನ್ನು ಮೀರಿ ವೈಯಕ್ತಿಕ ಮಟ್ಟಕ್ಕೆ ಜಾರಿವೆ. ನಾಯಕರ ಭಾಷೆ, ಹಾವ-ಭಾವಗಳು ಬೀದಿ ಜಗಳ ಕ್ಕಿಂತಲೂ ಕೆಳಮಟ್ಟದಲ್ಲಿವೆ. ಒಬ್ಬರನ್ನೊಬ್ಬರು ಜೈಲಿಗೆ ಕಳುಹಿಸುವ ಮಾತುಗಳು ಕೇಳಿ ಬರುತ್ತಿವೆ.

ಹಳೆಯ ಕಡತಗಳನ್ನು ಬಿಚ್ಚಿ ಪರಸ್ಪರರ ತಪ್ಪುಗಳನ್ನು ಹೆಕ್ಕಿ ತೆಗೆಯಲು ದಲ್ಲಾಳಿಗಳು ಹುಟ್ಟಿಕೊಂಡಿದ್ದಾರೆ. ತಪ್ಪು ಮಾಡಿದ ನಾಯಕರು ಕಾನೂನು ಪ್ರಕಾರ ಶಿಕ್ಷೆ ಅನುಭವಿಸಲೇಬೇಕು. ಆದರೆ ಜೈಲಿಗೆ ಕಳುಹಿಸದೆ ಬಿಡಲಾರೆ ಎಂಬ ಸವಾಲಿನ ಮಾತುಗಳು ರಾಜಕಾರಣಕ್ಕೆ ತಕ್ಕುದಲ್ಲ. ಸಾರ್ವಜನಿಕ ಸೇವೆ, ಜನರ ಒಳಿತಿಗಾಗಿ ಆಯ್ಕೆ ಮಾಡಿಕೊಳ್ಳುವ ರಾಜಕಾರಣ ದ್ವೇಷದ ಕುಲುಮೆಯಾಗಬಾರದು. ಭಿನ್ನಾಭಿಪ್ರಾಯಗಳನ್ನು ಪ್ರಜಾತಂತ್ರದ ಮೌಲ್ಯಗಳನ್ನಾಗಿ ಕಾಣುವ ಗುಣ ಇಲ್ಲದೇ ಹೋದರೆ ನಾಯಕರು, ನಾಯಕರಾಗಿ ಉಳಿಯದೇ ಸರ್ವಾಧಿಕಾರಿಗಳಾಗುತ್ತಾರೆ.

ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ನಾವು ಈಗ ಕಾಣುತ್ತಿರುವ ಬೆಳವಣಿಗೆಗಳು ಮುಂದಿನ ರಾಜಕಾರಣದ ದಿಕ್ಕನ್ನು ಸೂಚಿಸುತ್ತಿವೆ. ಸಚ್ಚಾರಿತ್ರ್ಯದ ವ್ಯಕ್ತಿ
ಗಳಾರೂ ಇನ್ನು ಮುಂದೆ ರಾಜಕಾರಣಕ್ಕೆ ಬರುವಂತಿಲ್ಲ, ಬಂದರೂ ಅವರ ತೇಜೋವಧೆ ತಪ್ಪುವುದಿಲ್ಲ ಎಂಬ ಸಂದೇಶ ಎಲ್ಲೆಡೆ ರವಾನೆಯಾಗು ತ್ತಿರುವುದು ದುರದೃಷ್ಟಕರ. ಸಿಎಂ ಸಿದ್ದರಾಮಯ್ಯ ಅವರು ಇದೀಗ ಮುಡಾ ಪ್ರಕರಣದಲ್ಲಿ ಕಾನೂನು ಹೋರಾಟದಲ್ಲಿದ್ದಾರೆ. ಇವರೊಂದಿಗೆ ಡಿಸಿಎಂ,
ಮಾಜಿ ಸಿಎಂಗಳು ಹಳೆಯ ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.

ಎರಡನೇ ಹಂತದ ಇನ್ನಷ್ಟು ನಾಯಕರು ಬೇರೆ, ಬೇರೆ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ. ಕಾನೂನಿನ ಪರಿಮಿತಿಯಲ್ಲಿ, ಪ್ರಜಾಪ್ರಭುತ್ವದ ಸ್ಥಾಪಿತ ಮೌಲ್ಯಗಳಡಿಯಲ್ಲಿ ಇವರ ವಿಚಾರಣೆ ನಡೆಯಲಿ. ಅಪರಾಧಿಗಳಿಗೆ ಶಿಕ್ಷೆಯಾಗಿ, ನಿರಪರಾಽಗಳಿಗೆ ನ್ಯಾಯ ಸಿಗಲಿ. ವೈಯಕ್ತಿಕ ದ್ವೇಷಕ್ಕೆ, ನೀಚ ರಾಜಕಾರಣಕ್ಕೆ ಕಾನೂನು ಮತ್ತು ತನಿಖಾ ಸಂಸ್ಥೆಗಳ ದುರ್ಬಳಕೆ ಆಗದಿರಲಿ.