Sunday, 15th December 2024

ನೈಸರ್ಗಿಕ ವಿಕೋಪ: ಪರಿಹಾರಕ್ಕಿಂತ ಜಾಗೃತಿ ಬೇಕಿದೆ

ಇತ್ತೀಚಿನ ದಿನಗಳಲ್ಲಿ ಜಗತ್ತಿನ ಎಡೆ ನೈಸರ್ಗಿಕ ವಿಕೋಪಗಳ ತೀವ್ರತೆ ಹೆಚ್ಚುತ್ತಿದೆ. ಹಿಂದೆಲ್ಲ ಅಪರೂಪಕ್ಕೆ ಸಂಭವಿಸುತ್ತಿದ್ದ ಮಹಾಮಳೆ, ಭೂಕಂಪನ, ಬರ, ಭೂಕುಸಿತ, ಹಿಮಕುಸಿತ, ಚಂಡಮಾರುತದಂಥ ಘಟನೆಗಳು ಪದೇ ಪದೆ ಸಂಭವಿಸುತ್ತಿವೆ. ಹಿಂದುಳಿದ ಪ್ರದೇಶಗಳ ಜನರೇ ಅವುಗಳಿಗೆ ಹೆಚ್ಚುಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಊಹೆಗೂ ಮೀರಿ ಆದ ಹಾನಿಯ ನಂತರ ಸರಕಾರವು ಅವರ ನೆರವಿಗೆ ಧಾವಿಸಿ, ಸತ್ತವರ ಕುಟುಂಬಗಳಿಗೆ ಪರಿಹಾರ ನೀಡುತ್ತದೆ.

ಆದರೆ ಆಗಬೇಕಿರುವುದು ಇದಲ್ಲ. ನೈಸರ್ಗಿಕ ವಿಕೋಪಗಳಿಂದ ರಕ್ಷಣೆ ಮಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಯಾವ ಬಗೆಯ ಸಂಕಟಗಳು ಹೇಗೆ ಎದುರಾಗುತ್ತವೆ ಎಂಬುದನ್ನು ಜನರಿಗೆ ಸ್ಪಷ್ಟವಾಗಿ, ಸರಳವಾಗಿ ತಿಳಿಸಿ ಹೇಳಿದರೆ ಅವರು ತಮ್ಮ ಮುಂಜಾಗ್ರತಾ ಕ್ರಮಗಳನ್ನು ತಾವೇ ಕೈಗೊಳ್ಳು ತ್ತಾರೆ. ಅಷ್ಟರಮಟ್ಟಿಗೆ ಸಂಕಟ ನಿವಾರಣಾ ಕ್ರಮಗಳನ್ನು ಕೈಗೊಳ್ಳಬೇಕಾದ ಸರಕಾರಿ ಹೊಣೆಗಾರಿಕೆಯೂ ಕಡಿಮೆಯಾಗುತ್ತದೆ.

ಉದಾಹರಣೆಗೆ, ಕಳೆದ ಹತ್ತು ದಿನಗಳಿಂದ ಭೂಕಂಪನ ಸಂಭವಿಸುತ್ತಿರುವ ಕಲಬುರಗಿ ಜಿಲ್ಲೆಯಲ್ಲಿ ಯಾವ ರೀತಿಯ ಕಟ್ಟಡಗಳನ್ನು ನಿರ್ಮಾಣ ಮಾಡಿದರೆ ನಿಮ್ಮ ಜೀವ ಸುರಕ್ಷಿತ ಎಂಬ ತಿಳಿವಳಿಕೆ ಕೊಡಬೇಕಿದೆ. ರಿಕ್ಟರ್ ಮಾಪಕದಲ್ಲಿ ಎಂಟರಷ್ಟು ತೀವ್ರ ಭೂಕಂಪನವಾದರೂ ನಿರಾತಂಕ ವಾಸಿಸಬಹುದಾದ ಮನೆಗಳನ್ನು ಕಟ್ಟು ವಂಥ ಜಪಾನೀ ತಂತ್ರಜ್ಞಾನ ಈಗ ನಮ್ಮಲ್ಲೂ ಲಭ್ಯವಿದೆ. ಉತ್ತರ ಕರ್ನಾಟಕದಲ್ಲಿ ಹೇರಳ ಸಿಗುವ ಹತ್ತಿಕಟ್ಟಿಗೆ, ಜೋಳದಕಡ್ಡಿ, ತೊಗರಿ ಕಡ್ಡಿಗಳಂಥ ಕೃಷಿತ್ಯಾಜ್ಯಗಳಿಂದಲೇ ಗಟ್ಟಿಮುಟ್ಟಾದ ಹಲಗೆಗಳನ್ನು ತಯಾರಿಸಿ, ಅಲ್ಪವೆಚ್ಚದ ಗೋಡೆ ಸೂರುಗಳನ್ನು ನಮ್ಮಲ್ಲೂ ಕಟ್ಟ ಬಹುದು ಎಂಬುದನ್ನು ಆ ಭಾಗದ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ.

ಇನ್ನು, ತಗ್ಗು ಪ್ರದೇಶಗಳಲ್ಲಿ ಮನೆ ನಿರ್ಮಿಸುವುದರಿಂದ ಮಹಾಮಳೆಗೆ ಬಲಿಯಾಗಬೇಕಾಗುತ್ತದೆ. ಮನೆ ನಿರ್ಮಾಣಕ್ಕೂ ಮುನ್ನ ನಿಮ್ಮ ಸ್ಥಳವನ್ನು ಎತ್ತರವಾಗಿಸಿ ಕೊಳ್ಳಬೇಕು ಅಥವಾ ಎತ್ತರವಿರುವ ಪ್ರದೇಶದಲ್ಲೇ ಮನೆ ನಿರ್ಮಿಸಬೇಕು ಎಂಬುದನ್ನು ತಿಳಿಸಬೇಕು. ಹೀಗೆ ಪ್ರತಿ ನೈಸರ್ಗಿಕ ವಿಕೋಪಗಳಿಂದಲೂ ಪರಿಹಾರ ಇವೆ. ಅವುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ.