Thursday, 12th December 2024

ಹಬ್ಬದ ವೇಳೆಯೇ ಹುನ್ನಾರವೇಕೆ?

ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಗಡಿಭಾಗವಾದ ಕಡಮಕಲ್ಲು ಸನಿಹದ ಕೂಜಿಮಲೆ ರಬ್ಬರ್ ಎಸ್ಟೇಟ್ ಬಳಿ ಶಸ್ತ್ರ ಸಜ್ಜಿತ ನಕ್ಸಲರು ಕಾಣಿಸಿ ಕೊಂಡ ಸುದ್ದಿ ಹಬ್ಬಿದೆ. ಸುಮಾರು ೮ ಮಂದಿಯನ್ನು ಒಳಗೊಂಡ ಇಂಥವರ ತಂಡವೊಂದು ಈ ಪ್ರದೇಶದ ಆಸುಪಾಸಿನಲ್ಲಿ ಶಂಕಾಸ್ಪದ ರೀತಿಯಲ್ಲಿ ಠಳಾಯಿಸುತ್ತಿದ್ದುದು ಗೊತ್ತಾಗಿದೆ. ವಿಷಯ ತಿಳಿಯುತ್ತಿದ್ದಂತೆ ನಕ್ಸಲ್ ನಿಗ್ರಹ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಆಸುಪಾಸಿನ ನಿರ್ದಿಷ್ಟ ನೆಲೆಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ ಶುರುಮಾಡಿದ್ದಾರೆ ಎಂಬುದು ಲಭ್ಯ ಮಾಹಿತಿ.

ಮುಖ್ಯವಾಹಿನಿಯಿಂದ ವಿಮುಖರಾಗಿರುವ ನಕ್ಸಲರು ಆಗೊಮ್ಮೆ ಈಗೊಮ್ಮೆ ಹೀಗೆ ಕಾಣಿಸಿಕೊಳ್ಳುವುದಿದೆ. ಆದರೆ ಈ ಸಲ ಅವರು ಕಾಣಿಸಿಕೊಂಡಿರುವು ದಕ್ಕೆ ಬೇರೆಯದೇ ರೀತಿಯಲ್ಲಿ ಅರ್ಥೈಸಲಾಗುತ್ತಿದೆ. ಹೇಳಿ ಕೇಳಿ ಇದು ಪ್ರಜಾಪ್ರಭುತ್ವದ ಹಬ್ಬವಾದ ಚುನಾವಣೆಯ ಘಟ್ಟವಾಗಿರುವುದರಿಂದ ಇಂಥ ಯಾವುದೇ ಬೆಳವಣಿಗೆಗಳನ್ನು ನಿರ್ಲಕ್ಷಿಸಲಾಗದು ಎಂಬ ಅಭಿಪ್ರಾಯವೂ ಇಲ್ಲಿ ಕೇಳಿಬರುತ್ತಿದೆ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಪ್ರತಿ ಬಾರಿಯ ಚುನಾ ವಣೆಯ ವೇಳೆ ನಕ್ಸಲರು ಕೊಡಗಿನ ಗಡಿಭಾಗದಲ್ಲಿ ಹೀಗೆ ಕಾಣಿಸಿಕೊಳ್ಳುವುದು ವಾಡಿಕೆಯಾಗಿದೆ.

ಲೋಕಸಭಾ ಚುನಾವಣಾ ವರ್ಷವಾಗಿದ್ದ ೨೦೧೯ರ ಫೆಬ್ರವರಿ ತಿಂಗಳಲ್ಲೂ ನಕ್ಸಲರು ಕೊಡಗಿನ ಸಂಪಾಜೆ ಗುಡ್ಡೆಗದ್ದೆ ಪ್ರದೇಶದಲ್ಲಿ ಠಳಾಯಿಸಿದ್ದುಂಟು. ಅದೇನೇ ಇರಲಿ, ನಕ್ಸಲ್ ನಿಗ್ರಹ ಪಡೆ ಸೇರಿದಂತೆ ಒಂದಿಡೀ ಆಳುಗ ವ್ಯವಸ್ಥೆ ಈ ವಿಷಯದಲ್ಲಿ ಹದ್ದಿನಕಣ್ಣು ಇರಿಸಬೇಕಾದ್ದು ಈ ಕ್ಷಣದ ಅನಿವಾರ್ಯತೆ.
ಚುನಾವಣೆಯ ಸಂದರ್ಭದಲ್ಲಿ ಸದರಿ ನಕ್ಸಲರು ಗ್ರಾಮೀಣ ಭಾಗದ ಜನರನ್ನು ಹಾಗೂ ಅರಣ್ಯ ಮತ್ತು ಬೆಟ್ಟಗುಡ್ಡ ಪ್ರದೇಶಗಳಿಗೆ ತಾಗಿಕೊಂಡಿರುವ ನೆಲೆಗಳಲ್ಲಿ ವಾಸವಿರುವವರನ್ನು ದಿಕ್ಕು ತಪ್ಪಿಸಲು ಯತ್ನಿಸುತ್ತಾರೆ ಎಂಬ ಅಭಿಪ್ರಾಯ ಕೇಳಿಬಂದಿರುವ ಹಿನ್ನೆಲೆಯಲ್ಲಿ ಇಂಥದೊಂದು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕಿದೆ.

‘ಸರ್ವಜನಾಂಗದ ಶಾಂತಿಯ ತೋಟ’ ಎಂಬ ಹೆಸರು ಗಳಿಸಿಕೊಂಡಿರುವ ಕರ್ನಾಟಕದಲ್ಲಿ, ಶಾಂತಿ ಮತ್ತು ನೆಮ್ಮದಿಗೆ ಭಂಗ ತರಬಲ್ಲ ಸಾಧ್ಯತೆಯಿರುವ ಯಾವೊಂದು ಬೆಳವಣಿಗೆಯನ್ನೂ ನಿರ್ಲಕ್ಷಿಸಲಾಗದು. ಹಾಗೊಮ್ಮೆ ಉದಾಸೀನ ತೋರಿದಲ್ಲಿ ಅದು ಜನರ ಪಾಲಿಗೆ ದುಬಾರಿಯಾಗಿ ಪರಿಣಮಿಸಬಲ್ಲದು.