ಸ್ಥಳೀಯ ಭಾಷೆಯನ್ನು ಎಲ್ಲ ಹಂತದಲ್ಲಿಯೂ ಜಾರಿಗೊಳಿಸಿ ಗ್ರಾಹಕ ಸ್ನೇಹಿ ವಾತವರಣ ಸೃಷ್ಟಿಸಬೇಕೆಂಬುದು ಬಹುದಿನಗಳ ಬೇಡಿಕೆ.
ಮುಖ್ಯವಾಗಿ ಬ್ಯಾಂಕ್‌ಗಳಲ್ಲಿ ದೈನಂದಿನ ವ್ಯವಹಾರವನ್ನು ಜನರಿಗೆ ಅರ್ಥವಾಗುವಂತೆ ಸ್ಥಳೀಯ ಭಾಷೆಯಲ್ಲಿಯೇ ನಡೆಸ ಬೇಕೆಂಬ ಕೂಗು ಸಹ ಬಹುದಿನಗಳಿಂದ ಕೇಳಿಬರಲಾ ರಂಭಿಸಿದೆ. ನವೆಂಬರ್ ಮಾಸದಲ್ಲಿ ಪ್ರಮುಖವಾಗಿ ಕೇಳಿಬರುವ ಇಂಥ ಬಹುತೇಕ ಭಾಷೆ ಸಮಸ್ಯೆಯ ಕೂಗು ನಂತರ ಕ್ಷೀಣಿಸುವುದನ್ನು ಕಾಣುತ್ತಿದ್ದೇವೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕರ್ನಾಟಕವು ಮಹತ್ವದ ಪಾತ್ರವಹಿಸಿದ್ದರೂ, ಬ್ಯಾಂಕ್‌ಗಳಲ್ಲಿ ಕನ್ನಡದ ಬಳಕೆ ಇಲ್ಲದೆ ಗ್ರಾಹಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಅನೇಕ ಬಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನ್ನಡದ ಬಳಕೆಯಾಗಬೇಕು, ಸ್ಥಳೀಯ ಭಾಷೆ ತಿಳಿದ ಅಧಿಕಾರಿಗಳ ನೇಮಕವಾಗಬೇಕು ಎಂದು ಒತ್ತಾಯಿಸಿ ಪ್ರತಿಭಟನೆಗಳು ಸಹ ನಡೆದಿವೆ. ಇಷ್ಟೆಲ್ಲ ಬೆಳವಣಿಗೆಗಳು ನಡೆದರೂ ಇಂದಿಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸ್ಥಳೀಯ ಭಾಷೆ ಕಡೆಗಣನೆಯಾಗುತ್ತಿರುವ ಅಪಸ್ವರಗಳು ಮೊಳಗುತ್ತಲೇ ಸಾಗಿವೆ. ಬಹು ವರ್ಷಗಳಿಂದ ಉಳಿದುಕೊಂಡು ಬಂದಿರುವ ಈ ಸಮಸ್ಯೆ ಇದೀಗ ಬಗೆಯಹರಿಯು ವಂಥ ಲಕ್ಷಣಗಳು ಗೋಚರವಾಗುತ್ತಿರುವುದು ರಾಜ್ಯದ ಪಾಲಿಗೆ ಉತ್ತಮ ಬೆಳವಣಿಗೆ.
ಇಂಥದೊಂದು ಸಮಸ್ಯೆ ನಿವಾರಣೆಗೊಳಿಸುವಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆಸಕ್ತಿ ವಹಿಸಿದ್ದು, ಕೇಂದ್ರ ಸರಕಾರವೂ ಸಹ ಕ್ರಮಕ್ಕೆ ಮುಂದಾಗಿದೆ. ಗ್ರಾಹಕರಿಕೆ ಉತ್ತಮ ಬ್ಯಾಂಕಿಂಗ್ ಸೇವೆ ಒದಗಿಸಲು ಸ್ಥಳೀಯ ಭಾಷೆ ತಿಳಿದಿರುವ ಅಧಿಕಾರಿಗಳ ನಿಯೋಜನೆಗಾಗಿ ಐಎಎಸ್ ಮತ್ತು ಐಪಿಎಸ್ ರೀತಿಯಲ್ಲಿ ‘ಅಧಿಕಾರಿಗಳ ಕೇಡರ್’ ರಚಿಸಲು ಕೇಂದ್ರ ವಿತ್ತ ಸಚಿವೆ ಸೂಚಿಸಿದ್ದಾರೆ. ಈ ಆದೇಶ ಜಾರಿಯಾಗುವುದರಿಂದ ಎಲ್ಲ ರಾಜ್ಯಗಳಲ್ಲಿನ ಗ್ರಾಹಕರು ಸ್ಥಳೀಯ ಭಾಷೆಯಲ್ಲಿಯೇ ಅಧಿಕಾರಿ ಗಳೊಂದಿಗೆ ಸಂವಹನ ನಡೆಸಲು ಸಾಧ್ಯವಾಗಲಿದೆ.
ಇದುವರೆಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಿಂದಿ ಭಾಷೆ ಮಾತ್ರವೇ ತಿಳಿದಿರುವ ಅಧಿಕಾರಿಗಳು ಇತರ ಭಾಗಗಳಿಗೆ ನೇಮಕವಾಗುತ್ತಿದ್ದ ಕಾರಣ, ಸ್ಥಳೀಯರು ಅಧಿಕಾರಿಗಳೊಂದಿಗೆ ಸಂವಹನ ನಡೆಸಲು ಸಾಧ್ಯವಾಗದೆ ತೊಂದರೆಗೆ ಒಳಗಾಗುತ್ತಿದ್ದರು. ಈ ಸಮಸ್ಯೆ ನಿವಾರಿಸುವಲ್ಲಿ ನಿರ್ಮಲಾ ಸೀತಾರಾಮನ್ ಅವರ ಪ್ರಯತ್ನ ಪರಿಣಾಮಕಾರಿ.