ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ಗೆ ಚಿಕಿತ್ಸೆ ಪಡೆದರೆ ಸರಕಾರದ ಕಡೆಯಿಂದ ಯಾವುದೇ ಸೌಲಭ್ಯ ಮತ್ತು ಪರಿಹಾರ ಸಿಗುವುದಿಲ್ಲ ಎಂದು ಸಚಿವ ಜೆ.ಸಿ.ಮಾಧು ಸ್ವಾಮಿ ಹೇಳಿದ್ದಾರೆ.
ಕೋವಿಡ್ ಮೂರನೇ ಅಲೆ ಎದುರಿಸಲು ಆಸ್ಪತ್ರೆಗಳಲ್ಲಿನ ಹಾಸಿಗೆಗಳ ಸಂಖ್ಯೆಯನ್ನು ಹಲವು ಪಟ್ಟು ಹೆಚ್ಚಿಸಿರು ವುದಾಗಿಯೂ ಹೇಳಿಕೊಂಡಿದ್ದಾರೆ. ಕೋವಿಡ್ ಚಿಕಿತ್ಸೆಗೆ ಗೊತ್ತುಪಡಿಸಲಾದ 1.94 ಲಕ್ಷ ಹಾಸಿಗೆಗಳಲ್ಲಿ ಶೇ 73.71 ರಷ್ಟು ಹಾಸಿಗೆಗಳು ಖಾಸಗಿಯವರ ನಿಯಂತ್ರಣದಲ್ಲಿಯೇ ಇವೆ ಎಂದು ಸಚಿವರಿಗೆ ತಿಳಿದಿರಲಿಕ್ಕಿಲ್ಲ. ಸರಕಾರವು ಕೋವಿಡ್ ಚಿಕಿತ್ಸೆಗೆ ಮೀಸಲಿರಿಸಿದ 51.093 ಹಾಸಿಗೆಗಳು ಸರಕಾರಿ ವ್ಯವಸ್ಥೆಯಡಿ ಇವೆ. ಇವು ಗಳಲ್ಲಿ ಸರಕಾರಿ ವೈದ್ಯಕೀಯ ಕಾಲೇಜುಗಳ ಹಾಸಿಗೆಗಳೂ ಸೇರಿವೆ.
1.43 ಲಕ್ಷ ಹಾಸಿಗೆಗಳು ಖಾಸಗಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜುಗಳ ಅಡಿಯಲ್ಲಿ ಗುರುತಿಸಲಾಗಿದೆ. ತಜ್ಞರು ಅಂದಾಜಿಸಿರುವ ಪ್ರಕಾರ ಫೆಬ್ರವರಿಯಲ್ಲಿ ಕೋವಿಡ್ ಉತ್ತುಂಗಕ್ಕೇ ಏರಿ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಳವಾಗಬಹುದು. ಹಾಗಾದಲ್ಲಿ, ಗಂಭೀರ ಆರೋಗ್ಯ ಸಮಸ್ಯೆ ಇರುವವರಿಗೆ ಚಿಕಿತ್ಸೆ ನೀಡಲು ಬೇಕಾಗುವ ಐಸಿಯು ಹಾಸಿಗೆ 7216 ಹಾಗೂ ವೆಂಟಿಲೇಟರ್ ಸಹಿತ ಐಸಿಯು ಹಾಸಿಗೆ 6123 ಮಾತ್ರ. ಕೋವಿಡ್ ಎರಡನೇ ಅಲೆಯ ಬಳಿಕ ಸರಕಾರವು ವೈದ್ಯಕೀಯ ಆಮ್ಲಜನಕ ತಯಾರಿಕಾ ಘಟಕಗಳ ನಿರ್ಮಾಣಕ್ಕೆ ಆದ್ಯತೆ ನೀಡಿತ್ತು.
ಪೆಟ್ರೋಲಿಯಂ ಕಂಪನಿಗಳು ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್) ಅಡಿಯಲ್ಲಿ 100 ಎಲ್‌ಪಿಎಂ ಸಾಮರ್ಥ್ಯದ 28 ಆಮ್ಲಜನಕ ತಯಾರಿಕಾ ಘಟಕಗಳನ್ನು ಯಾದಗಿರಿ, ವಿಜಯಪುರ ಸೇರಿದಂತೆ ವಿವಿಧೆಡೆ ನಿರ್ಮಿಸಿ ಕೊಡುವು ದಾಗಿ ಭರವಸೆ ನೀಡಿದ್ದವು. ಇವು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಪ್ರಾರಂಭ ಮಾಡಿಲ್ಲ. ಅದೇ ರೀತಿ, ರಾಜ್ಯ ಸರಕಾರ ಹೊಸದಾಗಿ ಕೈಗೆತ್ತಿಕೊಂಡ 40 ಘಟಕ ಗಳ ಅಳವಡಿಕೆಯೂ ಬಹುತೇಕ ಕಡೆ ಪ್ರಗತಿಯಲ್ಲಿದೆ. ಇದರಿಂದಾಗಿ ಆಸ್ಪತ್ರೆ ದಾಖಲಾತಿ ಹೆಚ್ಚಳವಾದಲ್ಲಿ ಖಾಸಗಿ ವೈದ್ಯಕೀಯ ವ್ಯವಸ್ಥೆಯನ್ನೇ ಸರಕಾರ ನೆಚ್ಚಿಕೊಳ್ಳಬೇಕಾಗಿದೆ ಎಂಬುದನ್ನು ಸಚಿವರು ಅರ್ಥ ಮಾಡಿಕೊಳ್ಳಬೇಕು.
ಪ್ರಾಣ ಹೋಗುವ ಸಂದರ್ಭದಲ್ಲಿ ರೋಗಿಗಳ ಪೋಷಕರು ಸಮೀಪದ ಖಾಸಗಿಯೋ, ಸರಕಾರಿಯೋ ಸಮೀಪದ ಆಸ್ಪತ್ರೆಗಳನ್ನು ಹುಡುಕಿಕೊಳ್ಳುತ್ತಾರೆಯೇ ವಿನಾಃ ಪರಿಹಾರಕ್ಕಾಗಿ ಯಾರೂ ಸರಕಾರಿ ಆಸ್ಪತ್ರೆಗಳ ಬಾಗಿಲು ಕಾಯುವ ಕೆಲಸ ಮಾಡುವುದಿಲ್ಲ ಎಂದು ಸಚಿವರು ಅರ್ಥ ಮಾಡಿಕೊಳ್ಳಬೇಕು.