ವರ್ಷದಿಂದ ವರ್ಷಕ್ಕೆ ಕೃಷಿಭೂಮಿ ಕ್ಷೀಣಿಸುತ್ತಿರುವುದು ಮುಂದೊಂದು ದಿನ ತೀವ್ರ ಆಹಾರ ಕ್ಷಾಮವನ್ನು ಸೃಷ್ಟಿಸಲಿದೆ ಎಂದು
ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಇಂತಹ ಸಂದರ್ಭದಲ್ಲೇ ಕೃಷಿಕರಲ್ಲದವರೂ ಕೃಷಿಭೂಮಿ ಖರೀದಿಸಲು ಅನುಕೂಲ ವಾಗುವಂತೆ ಸರಕಾರ ಕಾಯಿದೆಗೆ ಇತ್ತೀಚೆಗೆ ತಿದ್ದುಪಡಿ ತಂದಿದೆ.
ನಿಜಕ್ಕೂ ಇದು ಆತಂಕಕಾರಿ ಬೆಳವಣಿಗೆ. ಕಾರ್ಖಾನೆಗಳು, ವಿಶ್ವವಿದ್ಯಾಲಯಗಳು, ಸರಕಾ ರದ ಆಡಳಿತ ಕಚೇರಿಗಳು ಇವೆಲ್ಲವುಗಳ ಸ್ಥಾಪನೆಗೆ ಸಾವಿರಾರು ಎಕರೆ ಕೃಷಿಭೂಮಿ ಬಳಕೆ ಯಾಗುತ್ತಿದೆ. ರಸ್ತೆಗಳ ಅಗಲೀಕರಣ, ಹೆದ್ದಾರಿಗಳ ನಿರ್ಮಾಣದಲ್ಲಿಯೂ ಕೃಷಿಭೂಮಿ ಯನ್ನು ವಶಪಡಿಸಿಕೊಳ್ಳಲಾಗುತ್ತದೆ. ನಗರ ಪ್ರದೇಶಗಳಿಗೆ ಸಮೀಪದಲ್ಲಿರುವ ಹಳ್ಳಿಗಳ ಕೃಷಿಭೂಮಿ ಯಲ್ಲಿ ಇಟ್ಟಿಗೆ ಕಾರ್ಖಾನೆಗಳು, ರೆಸಾರ್ಟ್ಗಳು ಮತ್ತು ಡಾಬಾಗಳು ತಲೆ ಎತ್ತುತ್ತಲೇ ಇವೆ.
ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಎಡ-ಬಲದ ಕೃಷಿಭೂಮಿಯಲ್ಲಿ ಸಾಲುಸಾಲು ಮನೆ ಗಳು ಮತ್ತು ವಾಣಿಜ್ಯ ಸಂಕೀರ್ಣಗಳು ನಿರ್ಮಾಣಗೊಳ್ಳುತ್ತಲೇ ಇವೆ. ಹೀಗಾಗಿ ಕೃಷಿ ಭೂಮಿ ಯು ಈಗ ಹಣ ಹೂಡಿಕೆಯ ಉತ್ಪಾದನಾ ಕ್ಷೇತ್ರವಾಗಿ ಬಂಡವಾಳದಾರರನ್ನು ಆಕರ್ಷಿಸು ತ್ತಿದೆ. ಆರ್ಥಿಕ ಸ್ಥಿತಿವಂತರು ಭೂಮಿ ಖರೀದಿಗಾಗಿ ಹಣ ಹೂಡುತ್ತಿದ್ದಾರೆ. ಸ್ವಂತದ ಮನೆಯಿದ್ದೂ ಲಾಭದ ದೃಷ್ಟಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ನಿವೇಶನಗಳನ್ನು ಖರೀದಿ ಸುವ ದುರಾಸೆ ಜನರಲ್ಲಿ ಹೆಚ್ಚುತ್ತಿದೆ.
ಇದನ್ನೇ ಬಂಡವಾಳವಾಗಿಟ್ಟುಕೊಂಡು ಉದ್ಯಮಿಗಳು ರೈತರಿಂದ ಕಡಿಮೆ ಬೆಲೆಗೆ ಕೃಷಿ ಭೂಮಿಯನ್ನು ಖರೀದಿಸಿ ನಿವೇಶನ ಗಳನ್ನಾಗಿಸಿ ಮಾರಾಟ ಮಾಡುತ್ತಿzರೆ. ಕಪ್ಪುಹಣ ಭೂಮಿ ಖರೀದಿಗಾಗಿ ಹರಿದುಬರುತ್ತಿದೆ. ವರ್ಷವಿಡೀ ಮಣ್ಣಲ್ಲಿ ಮಣ್ಣಾಗಿ ದುಡಿದರೂ ನಾಲ್ಕು ಕಾಸು ಕಾಣದ ರೈತರು, ಬಂಡವಾಳದಾರರ ಆಮಿಷಕ್ಕೆ ಬಲಿಯಾಗಿ ಕೃಷಿಭೂಮಿಯನ್ನು ಪರಭಾರೆ ಮಾಡಿ ನಗರ ಪ್ರದೇಶಗಳಿಗೆ ಗುಳೆ ಹೋಗುತ್ತಿದ್ದಾರೆ.
ಇದರಿಂದಾಗಿ ಹಳ್ಳಿಗಳಲ್ಲಿ ಕೃಷಿ ಚಟುವಟಿಕೆಗೆ ಕೆಲಸಗಾರರು ದೊರೆಯದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಗಂಭೀರ ಸಮಸ್ಯೆ ಯನ್ನು ಹೋಗಲಾಡಿಸಲು ಮೊದಲು ರೈತರ ಸಮಸ್ಯೆಗಳು ಪರಿಹಾರ ಕಾಣುವಂತೆ ಆಗಬೇಕು. ಕೂಡಲೇ ಸರಕಾರ ಎಚ್ಚೆತ್ತು ಕೊಂಡು, ಕೃಷಿ ಭೂಮಿಯನ್ನು ಖರೀದಿಸಿ ಅದನ್ನು ವಸತಿ ಪ್ರದೇಶಗಳಾಗಿ ಪರಿವರ್ತಿಸುತ್ತಿರುವ ಬಂಡವಾಳದಾರರ ನಿಯಂತ್ರಣ ಕ್ಕೆ ಸೂಕ್ತ ಕಾನೂನು ಜಾರಿಗೆ ತರಬೇಕು. ಇಲ್ಲವಾದರೆ ಕೃಷಿಭೂಮಿ ಕ್ಷೀಣಿಸಿ, ಮುಂದೊಂದು ದಿನ ಆಹಾರ ಕ್ಷಾಮ ಸೃಷ್ಟಿಯಾಗುವ ಸಾಧ್ಯತೆ ಇದೆ.