ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಲಿಂಗನಮಠ ಗ್ರಾಮದಲ್ಲಿ ಶನಿವಾರ ಯುವಕನೊಬ್ಬನ ಆತ್ಮಹತ್ಯೆಯ ಹಿಂದಿನ ಕಥೆ ದಾರುಣವಾಗಿದೆ. ಹಾವೇರಿ ಜಿಲ್ಲೆಯ ಯಲಗಚ್ಚು ಗ್ರಾಮದ ಬಸವರಾಜ ವೆಂಕಟ ಎಂಬ ಯುವಕ ಮತ್ತು ಆತನ ತಾಯಿ ತುತ್ತು ಅನ್ನಕ್ಕಾಗಿ ಪರದಾಡಿ, ಕೊನೆಗೆ ಹಸಿವಿನಿಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಪ್ರಕರಣ ಇಡೀ ನಮ್ಮ ವ್ಯವಸ್ಥೆಯನ್ನೇ ಅಣಕಿಸುವಂತಿದೆ. ನಮ್ಮ ದೇಶವು ವಿಜ್ಞಾನ, ತಂತ್ರಜ್ಞಾನ, ಕೃಷಿ ಕ್ಷೇತ್ರದಲ್ಲಿ ಜಗತ್ತಿಗೆ ಸವಾಲೊಡ್ಡುವ ಸ್ಥಿತಿಯಲ್ಲಿ ಮುಂದುವರಿದರೂ ತುತ್ತು ಅನ್ನಕ್ಕಾಗಿ ಪರದಾಡುವ ಜನರೂ ನಮ್ಮ ನಡುವೆ ಇರುವುದು ದುರಂತ.
ಯಾರೊಬ್ಬರೂ ಹಸಿವಿನಿಂದ ಬಳಲಬಾರದು, ಜೀವನದ ಸಂಧ್ಯಾಕಾಲದಲ್ಲಿ ವೃದ್ಧರು ಯಾರೊಬ್ಬರ ಮೇಲೂ ಅವಲಂಬನೆಯಾಗಬಾರದು ಎಂಬ ಉದ್ದೇಶದಿಂದ ರಾಜ್ಯ ಸರಕಾರ ಅನ್ನಭಾಗ್ಯ, ವೃದ್ಧಾಪ್ಯ ವೇತನ ಯೋಜನೆಗಳನ್ನು ಜಾರಿ ಮಾಡಿದೆ. ಯಾರೊಬ್ಬರೂ ಉದ್ಯೋಗವಿಲ್ಲದೆ ಪರದಾಡು ವಂತಾಗಬಾರದು ಎಂಬ ಉದ್ದೇಶದಿಂದ ಕೇಂದ್ರ ಸರಕಾರವು ಮಹಾತ್ಮಾ ಗಾಂಽ ಉದ್ಯೋಗ ಖಾತ್ರಿ ಯೋಜನೆ ಜಾರಿ ಮಾಡಿದೆ. ಇಂತಹ ಅನೇಕ ಯೋಜನೆಗಳು ರಾಜ್ಯ ಮತ್ತು ಕೇಂದ್ರ ಸರಕಾರದ ಅಡಿಯಲ್ಲಿ ಜಾರಿಯಲ್ಲಿವೆ. ಆದರೆ ಇಂತಹ ಎಲ್ಲ ಯೋಜನೆಗಳಿಗೂ ಫಲಾನುಭವಿಗಳಾಗಲು ಸೂಕ್ತ ದಾಖಲೆಗಳು ಅಗತ್ಯ.
ಆದರೆ ದೇಶದಲ್ಲಿರುವ ಅನೇಕ ಅಲೆಮಾರಿ ಕುಟುಂಬಗಳು ಇಂದಿಗೂ ತಮ್ಮದೊಂದು ಗುರುತಿನ ಚೀಟಿ ಇಲ್ಲದೇ ಅಲೆಮಾರಿಗಳಾಗಿಯೇ ಬದುಕುತ್ತಿದ್ದಾರೆ. ಅವರ‍್ಯಾರಿಗೂ ಸರಕಾರಗಳ ಯಾವ ಯೋಜನೆಗಳೂ ಲಾಘು ಆಗುತ್ತಿಲ್ಲ. ಅನೇಕ ಯೋಜನೆಗಳಿಗೆ ಅನುಕೂಲಸ್ಥರೂ ಫಲಾನುಭವಿಗಳಾಗಿರುವ ಉದಾ ಹರಣೆಗಳಿವೆ. ಆದ್ದರಿಂದ ಸರಕಾರದ ಸೌಲಭ್ಯಗಳನ್ನು ಜನರಿಗೆ ಸರಿಯಾಗಿ ತಲುಪಿಸುವಲ್ಲಿ ಅಧಿಕಾರಿಗಳ ಪಾತ್ರ ಬಹಳಷ್ಟಿದೆ. ಅಲೆಮಾರಿ ಜನರು ತಾವಾ ಗಿಯೇ ನಮಗೆ ಸರಕಾರದ ಸೌಲಭ್ಯ ನೀಡಿ ಎಂದು ಅಽಕಾರಿಗಳ ಹತ್ತಿರ ಬರಲು ಸಾಧ್ಯವಿಲ್ಲ. ಆದ್ದರಿಂದ ಅಧಿಕಾರಿಗಳೇ ಅಲೆಮಾರಿ ಜನಾಂಗದ ಜನ ಎಲ್ಲಿ ವಾಸವಾಗಿದ್ದಾರೋ ಅಲ್ಲಿಗೆ ತೆರಳಿ ಸಭೆಗಳನ್ನು ಏರ್ಪಡಿಸಿ ಅವರಿಗೆ ಸರಕಾರದ ಸೌಲಭ್ಯಗಳ ಕುರಿತು ಮನವರಿಕೆ ಮಾಡಬೇಕಿದೆ. ಅವರಿಗೂ ಒಂದೆಡೆ ಸೂರು ಕಲ್ಪಿಸಬೇಕಿದೆ.
ಅವರ‍್ಯಾರೂ ಶಿಕ್ಷಣ, ಆರೋಗ್ಯದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಅಽಕಾರಿಗಳ ಮೇಲಿದೆ. ಆ ಮೂಲಕ ಇಂತಹ ಆತ್ಮಹತ್ಯೆ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕಿದೆ.