Wednesday, 18th September 2024

ಬರ ಪರಿಹಾರ; ನೀತಿ ಸಂಹಿತೆ ಅಡ್ಡಿಯಾಗಲ್ಲ

ಕಳೆದ ಒಂದು ವಾರದಿಂದ ರಾಜ್ಯದ ಹಲವೆಡೆ ಅಲ್ಲಲ್ಲಿ ಮಳೆಯಾಗುತ್ತಿದ್ದರೂ ಬಿಸಿಲಿನಿಂದ ಬಾಯ್ತೆರೆದ ಭೂಮಿಗೆ ಯಾವುದಕ್ಕೂ ಈ ಮಳೆ ಸಾಲದಂತಾ ಗಿದೆ. ಕಳೆದ ಮೂರ‍್ನಾಲ್ಕು ತಿಂಗಳಿಂದ ರಾಜ್ಯದ ಜನರು ಹಿಂದೆಂದೂ ನೋಡದಂತಹ ಬಿಸಿಲನ್ನು ನೋಡಿದ್ದಾರೆ.

ಈಗಲೂ ಅನೇಕ ಭಾಗಗಳಲ್ಲಿ ಬಿಸಿ ಗಾಳಿ ಬೀಸುತ್ತಿದೆ. ಬಹುತೇಕ ಜಿಲ್ಲೆಗಳಲ್ಲಿ ಬರ ತೀವ್ರವಾಗಿದೆ. ಕುಡಿಯವ ನೀರು, ಮೇವು ಸಿಗದೆ ಜಾನುವಾರುಗಳು ಕಂಗೆಟ್ಟಿವೆ. ರೈತರ ಬೆಳೆಯೂ ನಾಶವಾಗಿದೆ. ೨೯ ಜಿಗಳ ೧೪೯ ತಾಲೂಕುಗಳ ೧,೦೮೪ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ೧,೯೨೦ ಗ್ರಾಮಗಳಲ್ಲಿ
ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಕೊಳವೆಬಾವಿಗಳು ಬತ್ತಿವೆ. ನೀರಿನ ಮೂಲಗಳಾದ ಕೆರೆಗಳು ಒಣಗಿವೆ. ಬೆಂಗಳೂರು ಮಹಾನಗರ ಸೇರಿದಂತೆ ರಾಜ್ಯದ ಬಹುತೇಕ ನಗರ, ಪಟ್ಟಣಗಳಿಗೆ ನೀರು ಒದಗಿಸುತ್ತಿದ್ದ ರಾಜ್ಯದ ಬಹುಪಾಲು ಜಲಾಶಯಗಳಲ್ಲಿಯೂ ನೀರಿನ ಸಂಗ್ರಹ ಮಟ್ಟ ಕುಸಿದಿದೆ.

ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಭಾಗಗಳು ಬಿಸಿಲಿನ ಬೇಗೆಗೆ ತತ್ತರಿಸಿಹೋಗಿವೆ. ಕಾದ ಹೆಂಚಿನ ಮೇಲೆ ಬದುಕು ಎಂಬಂತಾಗಿದೆ ಅಲ್ಲಿಯ ಜನರ ಸ್ಥಿತಿ. ೨೨ ನಗರ ಸ್ಥಳೀಯ ಸಂಸ್ಥೆಗಳ ೧೮೮ ವಾರ್ಡ್‌ಗಳಲ್ಲಿಯೂ ನೀರಿನ ಕೊರತೆ ಎದುರಾಗಿದ್ದು, ಟ್ಯಾಂಕರ್‌ಗಳ ಮೂಲಕ ನೀರು ಒದಗಿಸಲಾಗುತ್ತಿದೆ. ಕೆಲವು ಕಡೆ ಖಾಸಗಿ ಕೊಳವೆಬಾವಿಗಳನ್ನೂ ಬಾಡಿಗೆಗೆ ಪಡೆದು ನೀರು ಕೊಡಲಾಗುತ್ತಿದೆ. ಜಾನುವಾರುಗಳಿಗೆ ಮೇವು ಪೂರೈಸಲು ಮೇವು ಬ್ಯಾಂಕ್‌ಗಳನ್ನು ಸ್ಥಾಪಿಸಲಾಗಿದ್ದರೂ ಅವು ಸಾಕಾಗುತ್ತಿಲ್ಲ. ಕೆಲವು ಗೋಶಾಲೆಗಳೂ ನೀರಿನ ಕೊರತೆ ಎದುರಿಸುತ್ತಿವೆ.

ಸಮಸ್ಯಾತ್ಮಕ ಪ್ರದೇಶಗಳನ್ನುಚುನಾವಣೆಗೆ ಮೊದಲೇ ಗುರುತಿಸಲಾಗಿತ್ತು. ತಕ್ಷಣವೇ ನೀರು ಪೂರೈಸಲು ಟ್ಯಾಂಕರ್‌ಗಳಿಗೆ ಟೆಂಡರ್ ಕೂಡ ಕರೆಯ ಲಾಗಿತ್ತು. ಆದರೆ ಚುನಾವಣೆ ಕಾರಣಕ್ಕೆ ಕಾರ್ಯಾದೇಶ ನೀಡಿರಲಿಲ್ಲ. ಇದೀಗ ರಾಜ್ಯದಲ್ಲಿ ಎರಡು ಹಂತಗಳಲ್ಲಿ ಮತದಾನ ಪ್ರಕ್ರಿಯೆ ಪೂರ್ಣ
ಗೊಂಡಿದೆ. ಬರದಿಂದ ಬಸವಳಿದಿರುವ ಜನರಿಗೆ ಪರಿಹಾರ ಒದಗಿಸಲು ಆಡಳಿತದ ಚುಕ್ಕಾಣಿ ಹಿಡಿದವರು ಹಾಗೂ ಅಧಿಕಾರಿಗಳು ಮುಂದಾಗ ಬೇಕಿದೆ. ಕುಡಿಯುವ ನೀರು ಒದಗಿಸುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕಿದೆ. ಬರ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಚುನಾವಣಾ ನೀತಿ ಸಂಹಿತೆ ಅಡ್ಡಿ ಆಗುವುದಿಲ್ಲ. ಈಗ ಯಾವುದೇ ನೆಪ ಹೇಳದೆ ಜನರ ಸಮಸ್ಯೆಗಳನ್ನು ಆಲಿಸಬೇಕು ಮತ್ತು ಸಮಸ್ಯೆ ಪರಿಹಾರಕ್ಕೆ ಧಾವಿಸಬೇಕು.

Leave a Reply

Your email address will not be published. Required fields are marked *