Friday, 13th December 2024

ಅತಿಥಿ ಸಚಿವರಾಗದಿರಿ

Basavaraj Bommai

ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗಿದೆ. ಬಹುತೇಕ ಸಚಿವ ರನ್ನು ತಮ್ಮ ತವರು ಜಿಲ್ಲೆಗಳನ್ನು ಬಿಟ್ಟು ಬೇರೆ ಜಿಲ್ಲೆಗಳಿಗೆ ನೇಮಕ ಮಾಡಲಾಗಿದೆ. ರಾಜಕೀಯ ಸಂಘರ್ಷ ವೇರ್ಪಡಬಾರದು ಎಂಬ ಕಾರಣದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದರೂ, ಅಭಿವೃದ್ಧಿ ವಿಚಾರವಾಗಿ ಇದು ಸೂಕ್ತ ನಿರ್ಧಾರವಲ್ಲ.

ಬೇರೆ ಜಿಲ್ಲೆಗಳ ಸಚಿವರನ್ನು ಉಸ್ತುವಾರಿಯಾಗಿ ನೇಮಕ ಮಾಡುವುದರಿಂದ ಉಸ್ತುವಾರಿ ವಹಿಸಿಕೊಂಡ ಜಿಲ್ಲೆಗಳಲ್ಲಿ ಆ ಸಚಿವರು ಯಾವುದೇ ಸಭೆಗಳನ್ನು ನಡೆಸದೆ, ಜಿಲ್ಲೆಗೆ ಭೇಟಿ ಕೊಡುವುದಕ್ಕೂ ಸಾಧ್ಯವಾಗದೇ, ಸರಕಾರಿ ಅಧಿಕಾರಿಗಳ ಸಭೆ ನಡೆಸದೇ ಇರುವುದರಿಂದ ಅಭಿವೃದ್ಧಿ ಕಾಮಗಾರಿಗಳು ಚುರುಕು ಪಡೆಯ ದಿರುವುದಕ್ಕೆ ಕಾರಣವಾಗುತ್ತದೆ. ಈ ಕುರಿತು ಈಗಾಗಲೇ ಸಾರ್ವಜನಿಕರು ಅನೇಕ ಬಾರಿ ಅಸಮಾಧಾನ ವನ್ನೂ ವ್ಯಕ್ತಪಡಿಸಿದ್ದಾರೆ.

ಪ್ರತಿ ಜಿಲ್ಲೆಯಲ್ಲೂ ಕೋವಿಡ್ ಪರಿಸ್ಥಿತಿ ಉಲ್ಬಣಿಸುತ್ತಿರುವ ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಪಾತ್ರ ಮಹತ್ವದ್ದಾಗಿರುತ್ತದೆ. ಕೋವಿಡ್ ನಿರ್ವಹಣೆ ಮತ್ತು ಪೂರ್ವ ಸಿದ್ಧತೆ ಕುರಿತು ಮೇಲ್ವಿಚಾರಣೆ ಕೈಗೊಳ್ಳುವು ದಕ್ಕಾಗಿ ಸಚಿವರು ಆಗಾಗ ಆಯಾ ಜಿಲ್ಲೆಗಳಿಗೆ ಭೇಟಿ ನೀಡಬೇಕಾಗುತ್ತದೆ, ಅಲ್ಲಿನ ಕುಂದು ಕೊರತೆಗಳನ್ನು ಕೇಳಬೇಕಾಗುತ್ತದೆ.

ಆದರೆ ಈ ಹಿಂದಿನ ಬಹುತೇಕ ಸಚಿವರು ಆ ಕೆಲಸವನ್ನು ಮಾಡಿಲ್ಲ. ಅದಕ್ಕೆ ಮುಖ್ಯ ಕಾರಣ ಅವರು ಆ ಜಿಲ್ಲೆಯವರಲ್ಲ ಎಂಬುದು. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಾರಿ ಆಯಾ ಜಿಲ್ಲೆಗಳ ಜನಪ್ರತಿನಿಽಗಳನ್ನೇ ಆಯಾ ಜಿಲ್ಲಾ ಉಸ್ತುವಾರಿಗಳನ್ನಾಗಿ ನೇಮಿಸಬೇಕಿತ್ತು. ಇಲ್ಲವಾದಲ್ಲಿ ಆಗೊಮ್ಮೆ-ಈಗೊಮ್ಮೆ ಭೇಟಿ ಕೊಡುವ ಮೂಲಕ ಅತಿಥಿ ಸಚಿವರಾತಗುವ ಸಂಪ್ರದಾಯಕ್ಕೆ ತಿಲಾಂಜಲಿ ನೀಡುವುದಕ್ಕೆ ಖಡಕ್ ಸೂಚನೆ ನೀಡಬೇಕಿದೆ. ಪ್ರತಿ ಜಿಲ್ಲಾ ಉಸ್ತುವಾರಿ ಸಚಿವರೂ ಆಯಾ ಜಿಲ್ಲೆಯ ಜನಸಾಮಾನ್ಯರ ಮನವಿಗಳನ್ನು ಸ್ವೀಕರಿಸಿ, ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತಂದು ವಿಲೇವಾರಿ ಮಾಡುವ ನಿಟ್ಟಿನಲ್ಲಿ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಬೇಕು.

ಕೇವಲ ರಾಷ್ಟ್ರೀಯ ಹಬ್ಬಗಳು ಸೇರಿದಂತೆ ಮೊದಲಾದ ಪ್ರಮುಖ ಸಂದರ್ಭಗಳಲ್ಲಿ ಮಾತ್ರ ಉಸ್ತುವಾರಿ ಸಚಿವರ ಪಾತ್ರ ನಿರ್ವಹಿಸದಂತಾಗಬಾರದು.