ಮಳೆರಾಯನ ಕಣ್ಣಾಮುಚ್ಚಾಲೆ ಹಾಗೂ ರಣರಣ ಬಿಸಿಲಿನ ಕಾರಣದಿಂದಾಗಿ ರಾಜ್ಯದಲ್ಲಿರುವ ಒಟ್ಟು ಜಲಾಶಯಗಳಲ್ಲಿನ ನೀರಿನ ಪ್ರಮಾಣ ಕ್ಷೀಣಿಸಿದೆ. ಕಳೆದ ಕೆಲ ವರ್ಷಗಳಿಗೆ ಹೋಲಿಸಿದಾಗ ಈ ಬಾರಿ ಸುಮಾರು ೪೦ ಟಿಎಂಸಿಯಷ್ಟು ನೀರಿನ ಕೊರತೆಯಿದೆ ಎಂದಿದೆ ತಜ್ಞರ ವರದಿ. ಇದು ನಿಜಕ್ಕೂ ಆತಂಕ ಕಾರಿ ಸಂಗತಿ.
‘ಮಳೆಯಾದರೆ ಬೆಳೆ, ಬೆಳೆಯಿದ್ದರೆ ಇಳೆ’ ಎಂಬುದೊಂದು ಮಾತಿದೆ. ಕೃಷಿಕಾರ್ಯಗಳಿಗೆ ಮಳೆನೀರನ್ನೇ ಮುಖ್ಯವಾಗಿ ಅವಲಂಬಿಸಿರುವ ನಮ್ಮ ದೇಶದ ಕೃಷಿಕರ ವಿಷಯದಲ್ಲಿ ಈ ಮಾತು ನಿತ್ಯಸತ್ಯವಾಗಿದೆ. ಆದರೆ ಸಮರ್ಪಕವಾಗಿ ಮಳೆಯಾಗದಿದ್ದರೆ ಸಮಸ್ಯೆಯು ಕೃಷಿ ಕ್ಷೇತ್ರವೊಂದಕ್ಕೇ ಸೀಮಿತಗೊಳ್ಳುವು ದಿಲ್ಲ; ‘ಸರಣಿ ಪ್ರತಿಕ್ರಿಯೆ’ಯ ರೀತಿಯಲ್ಲಿ ಮಿಕ್ಕ ಕ್ಷೇತ್ರಗಳಿಗೂ ಅದರ ನೇರ ಮತ್ತು ಪಾರ್ಶ್ವ ಪರಿಣಾಮಗಳು ಹಬ್ಬುತ್ತಾ ಹೋಗುತ್ತವೆ. ಅಂದರೆ, ಬೇಳೆ-ಕಾಳುಗಳು, ಹಣ್ಣು-ತರಕಾರಿಗಳ ಸಮರ್ಪಕ ಇಳುವರಿ ಹಾಗೂ ಪೂರೈಕೆಗೆ ಸಂಚಕಾರ ಒದಗಿ ಮಾರುಕಟ್ಟೆಯಲ್ಲಿ ಅಭಾವ ಸೃಷ್ಟಿಯಾಗುತ್ತದೆ.
ಅದು ಬೆಲೆ ಏರಿಕೆಗೆ ಕಾರಣವಾಗುತ್ತದೆ. ತಮ್ಮ ಉದ್ಯಮ-ವಹಿವಾಟುಗಳಿಗೆ ಕೃಷಿ ಉತ್ಪನ್ನಗಳನ್ನೇ ನೆಚ್ಚಿರುವವರು ಮತ್ತೊಂದು ತೆರನಾದ ಅಸ್ಥಿರತೆ ಯನ್ನು ಎದುರಿಸಬೇಕಾಗುತ್ತದೆ. ಹೀಗೆ ಮಳೆಯ ವೈ-ಲ್ಯ ಮತ್ತು ಜಲಾಶಯಗಳ ಬತ್ತುವಿಕೆಯ ಕಾರಣದಿಂದಾಗಿ ಒಂದಿಡೀ ಸಾಮಾಜಿಕ ವ್ಯವಸ್ಥೆಯೇ
ಅಸ್ತವ್ಯಸ್ತಗೊಳ್ಳುತ್ತದೆ ಎಂಬುದು ಸ್ಪಷ್ಟಗೋಚರ. ಅಭಿವೃದ್ಧಿಯ ಹುಕಿಗೆ ಬಿದ್ದು, ಅತಿರೇಕದ ನಗರೀಕರಣದ ಪರಿಪಾಠಕ್ಕೆ ಒಡ್ಡಿಕೊಂಡ ಪರಿಣಾಮವಾಗಿ
ಅರಣ್ಯಗಳ ನಾಶವಾಯಿತು ಮತ್ತು ಹಳ್ಳಿ-ಪಟ್ಟಣಗಳ ನಡುವಿನಲ್ಲಿ, ಹೊರವಲಯಗಳಲ್ಲಿ ಮೈಚೆಲ್ಲಿಕೊಂಡಿದ್ದ ಮರಗಳಿಗೂ ಸಂಚಕಾರ ಒದಗಿತು.
ಜಲಚಕ್ರವು ಅಬಾಧಿತವಾಗಿ ಸುತ್ತುವುದಕ್ಕೆ ಅನುವು ಮಾಡಿ ಕೊಡುವ ಇಂಥ ಪೂರಕ ವ್ಯವಸ್ಥೆಗಳೇ ಕಣ್ಣು ಮುಚ್ಚಿಕೊಂಡರೆ ಮಳೆರಾಯ ಕಣ್ಣು ತೆರೆಯುವುದಾದರೂ ಹೇಗೆ? ಈ ಸರಳ ಸತ್ಯವನ್ನು ಅರ್ಥಮಾಡಿಕೊಳ್ಳಲು ಬ್ರಹ್ಮಜ್ಞಾನವೇನೂ ಬೇಕಾಗಿಲ್ಲ; ಆದರೆ ಸಂಬಂಧ ಪಟ್ಟವರು ಆ ಕಡೆಗೆ ಗಮನ ಹರಿಸುತ್ತಿಲ್ಲ. ಇದುವೇ ಸಮಸ್ಯೆಗೆ ಮೂಲಕಾರ ಣವಾಗಿದೆ. ಮಿಕ್ಕ ಕೃಷಿಪ್ರಧಾನ ದೇಶಗಳಲ್ಲಿ ವ್ಯವಸಾಯಕ್ಕೆ ಮಳೆಯನ್ನು ಹೊರತು ಪಡಿಸಿದ ಮತ್ತಾವ ನೀರಾವರಿ ವ್ಯವಸ್ಥೆಯನ್ನು ಹೇಗೆ ಒಪ್ಪ ಮಾಡಿಟ್ಟು ಕೊಳ್ಳಲಾಗಿದೆ ಎಂಬುದರ ಅಧ್ಯಯನಕ್ಕೆ ಮತ್ತು ಅಳವಡಿಕೆಗೆ ನಮ್ಮವರು ಇನ್ನಾದರೂ ಒಡ್ಡಿಕೊಳ್ಳಬೇಕು. ಇಲ್ಲವಾದರೆ ತೊಂದರೆ ಕಟ್ಟಿಟ್ಟಬುತ್ತಿ