ಮಹಾರಾಷ್ಟ್ರದಲ್ಲಿ ಕಳೆದ ಕೆಲವು ದಿನಗಳಿಂದ ಈರುಳ್ಳಿ ದರ ಪಾತಾಳಕ್ಕೆ ಕುಸಿತವಾಗಿದೆ. ಉತ್ತರ ಕರ್ನಾಟಕದ ರೈತರಿಗೆ ಸೊಲ್ಲಾಪುರವು ಮಾರುಕಟ್ಟೆ ಯಾಗಿದ್ದರಿಂದ ಈ ಬೆಲೆ ಕುಸಿತ ಕಂಡಿರುವುದು ರಾಜ್ಯದ ರೈತರ ಮೇಲೂ ಬೀರಿದೆ. ಇತ್ತೀಚೆಗೆ ಸೊಲ್ಲಾಪುರ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರೊಬ್ಬರು ಮಾರಾಟ ಮಾಡಿದ ಐದು ಕ್ವಿಂಟಾಲ್ ಈರುಳ್ಳಿಗೆ ರು.೨ ಚೆಕ್ ನೀಡಲಾಗಿದೆ.
ಈ ಪ್ರಕರಣದ ಕೆಲವೇ ದಿನಗಳ ಮೊದಲು ಫೆ.೧ರಂದು ವಿಜಯಪುರದ ರೈತರೊಬ್ಬರು ಈರುಳ್ಳಿ ವ್ಯಾಪಾರಿ ಯೊಬ್ಬರಿಗೆ ೮೨೫ ಕೆ.ಜಿ ಈರುಳ್ಳಿ ಮಾರಾಟ ಮಾಡಿದ್ದಾರೆ. ವ್ಯಾಪಾರಿ ಪ್ರತಿ ಕ್ವಿಂಟಲ್‌ಗೆ ರು.೧೦೦ರಂತೆ ಒಟ್ಟು ? ೮೨೫ ದರ ನೀಡಿ ಕಳುಹಿಸಿದ್ದಾರೆ. ಅದರಲ್ಲಿ ಹಮಾಲಿ ಕೂಲಿ ರು.೬೫.೧೮, ತೂಕದ ಖರ್ಚು ರು.೩೮.೭೮, ಇತರ ಹಮಾಲಿ ರು.೨೫.೫೦, ವಾಹನದ ಬಾಡಿಗೆ ರು.೬೯೭ ಸೇರಿದಂತೆ ಒಟ್ಟು ರು.೮೨೬ ನೀಡಿದ್ದಾರೆ. ಅಲ್ಲದೇ, ರೈತ ಕೈಯಿಂದ ವ್ಯಾಪಾರಿಗೆ ?೧ ನೀಡಿ ಬರಿಗೈಲಿ ಮನೆಗೆ ಹಿಂದಿರುಗಿದ್ದಾರೆ.
ಈ ಬಿಲ್ಲಿನ ಮೊತ್ತದ ಪಾವತಿ ಫೇಸ್‌ಬುಕ್, ವಾಟ್ ಆಪ್‌ಗಳಲ್ಲಿ ಜೋರಾಗಿ ಹರಿದಾಡುತ್ತಿದೆ. ರೈತರು ಒಂದು ಎಕರೆ ಈರುಳ್ಳಿ ಬೆಳೆಯಲು ಸುಮಾರು ? ೫೫ ಸಾವಿರದವರೆಗೂ ಬಂಡವಾಳ ಹಾಕಬೇಕಾಗುತ್ತದೆ. ಹಾಗೆಯೇ ಒಂದು ಕೆ.ಜಿ. ಈರುಳ್ಳಿ ಬೀಜದ ಬೆಲೆ ರು. ೧,೫೦೦ ಇದೆ. ಆದರೆ ಒಂದು ಕ್ವಿಂಟಲ್ ಈರುಳ್ಳಿಯ ಪ್ರಸ್ತುತ ಬೆಲೆ ಕೇವಲ ರು. ೨೫೦ರಿಂದ ೫೦೦ ಆಗಿದೆ. ಈ ಬೆಲೆಯಲ್ಲಿ ಎಕರೆಗೆ ರೈತರಿಗೆ ಸಿಗುವುದು ಬರೀ ರು. ೩೦,೦೦೦ದಿಂದ ೪೦,೦೦೦ ಅಷ್ಟೇ. ಹೀಗಾದರೆ ರೈತನ ಪರಿಸ್ಥಿತಿ ಏನಾಗ ಬಹುದು? ರಾಜ್ಯದಲ್ಲಿ ರೈತರ ಸಂಕಷ್ಟ ಮಿತಿಮೀರುವುದಕ್ಕೆ ಇದಕ್ಕಿಂತ ಕಾರಣಗಳು ಬೇಕಿಲ್ಲ. ಎಲ್ಲರೂ ಬರೀ ಮಾತಿ ಗಷ್ಟೇ ರೈತ ದೇಶದ ಬೆನ್ನೆಲುಬು ಎಂದು ಹೇಳುತ್ತಾರೆ. ಆದರೆ ಈಗ ಎಲ್ಲರೂ ಸೇರಿ ರೈತನ ಬೆನ್ನೆಲುಬನ್ನೇ ಮುರಿಯುತ್ತಿದ್ದಾರೆ.
ಈರುಳ್ಳಿಯನ್ನು ನಂಬಿದ್ದ ರೈತರಂತೂ ಈಗ ಅದೇ ಈರುಳ್ಳಿಯ ಮುಂದೆ ಕುಳಿತು ಅಳುವಂತಹ ಪರಿಸ್ಥಿತಿ ಉಂಟಾಗಿದೆ. ಸರಕಾರ ಕೂಡಲೇ ಈರುಳ್ಳಿಗೆ ಬೆಂಬಲ ಬೆಲೆ ಘೋಷಿಸಬೇಕು, ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕಿದೆ.