Wednesday, 11th December 2024

ಮಾತನಾಡುವುದೇ ಸಾಧನೆಯಲ್ಲ

ಕೆಲವು ತಿಂಗಳುಗಳಿಂದ ರಾಜ್ಯದಲ್ಲಿ ಧರ್ಮ ಸಂಘರ್ಷದ ಕಾರಣದಿಂದ ಅಹಿತಕರ ಘಟನೆಗಳು ಎಲ್ಲೇ ಮೀರಿ ನಡೆದಿವೆ. ‘ಮೂಕ ಬಸವ’ ಎಂದು ಪ್ರತಿಪಕ್ಷಗಳು ಸಿಎಂ ಬೊಮ್ಮಾಯಿ ಅವರನ್ನು ಟೀಕಿಸುತ್ತಿವೆ.

ರಾಜ್ಯದಲ್ಲಿ ಅಶಾಂತಿಗೆ ಕಾರಣವಾಗುವ ವಿದ್ಯಮಾನ ನಡೆಯುತ್ತಿದ್ದರೂ ಸಿಎಂ ಏಕೆ ಮೌನ ವಹಿಸಿದ್ದಾರೆ ಎಂಬುದು ರಾಜಕೀಯ ನಾಯಕರಲ್ಲದೆ, ಸಮಸ್ತ ನಾಡಿನ ಜನರ ಪ್ರಶ್ನೆಯಾಗಿದೆ. ಅವರ ಮೌನವು ಚರ್ಚೆಗೆ ಗ್ರಾಸವಾ ಗಿತ್ತು. ಈ ಹಿಂದೆ ಡಾ.ಮನ ಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ ಅವರಿಗೂ ‘ಮೌನಿ’ ಪದವನ್ನೇ ಬಳಸಿ, ಸಾಕಷ್ಟು ತಿವಿಯಲಾಗಿತ್ತು. ಇಂತಹ ಸಂದರ್ಭದಲ್ಲಿ ಬಹುತೇಕ ಬಾರಿ ಕೂಗುಮಾರಿ ಗಳದ್ದೇ ಮೇಲುಗೈ ಆಗುತ್ತದೆ. ಆದರೆ ಸಂವಿಧಾನ ಬದ್ಧ ಸರಕಾರದ ಮುಖ್ಯಸ್ಥರು ಪ್ರತಿ ವಿಷಯಕ್ಕೂ ಮಾತನಾಡಬೇಕು ಎಂದು ಬಯಸುವುದು ತಪ್ಪು.

ಅಭಿವೃದ್ಧಿ ವಿಚಾರದಲ್ಲಿ ಟೀಕೆ- ಟಿಪ್ಪಣಿಗಳಿಗೆ ಉತ್ತರಿಸಲೇಬೇಕಾದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ತಕ್ಕ ಉತ್ತರ ನೀಡಿದ್ದಾರೆ. ಆದರೆ ರಾಜ್ಯದಲ್ಲಿ ನಡೆದ ಅನಗತ್ಯ ವಿವಾದಗಳು ಹಾಗೂ ಜನರ ಮಧ್ಯೆ ವಿಷ ಭಾವನೆ ಬಿತ್ತುವ ಘಟನಾವಳಿಗಳಿಗೆ ಮುಖ್ಯಮಂತ್ರಿಗಳು ಉತ್ತರ ನೀಡುತ್ತಾ ಹೋದರೆ ಅವುಗಳಿಗೆಲ್ಲ ಮತ್ತಷ್ಟು ಪ್ರಚೋದನೆ ಸಿಗುತ್ತದೆ. ಹೀಗಾಗಿ ಬೊಮ್ಮಾಯಿ ಅವರು ಈ ಸಂದರ್ಭದಲ್ಲಿ ಜಾಣ ಹೆಜ್ಜೆ ಇಡುತ್ತಿದ್ದಾರೆ. ಆದರೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದಿಸೆಯಲ್ಲಿ ಕೋಮು ಸೌಹಾರ್ದ, ಭಾವೈಕ್ಯಕ್ಕೆ ಭಂಗ ಉಂಟು ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗು ವುದು ಎಂದು ಸಿಎಂ ಪುಂಡ ಪೋಕರಿಗಳಿಗೆ ಎಚ್ಚರಿಕೆ ನೀಡುವ ಮೂಲಕ ತಮ್ಮ ಪಾತ್ರವನ್ನು ಸರಿಯಾಗಿಯೇ ನಿಭಾಯಿಸಿದ್ದಾರೆ.

ನಾವು ಮಾತನಾಡಬಾರದು, ನಮ್ಮ ಕೆಲಸಗಳು ಮಾತನಾಡಬೇಕು. ಯಾವ ಸಂದರ್ಭದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ನಮಗೆ ತಿಳಿದಿದೆ. ಬೇರೆಯವರಿಂದ ನಾವು ಪಾಠ ಕಲಿಯಬೇಕಾಗಿಲ್ಲ ಎಂದು ಪ್ರತಿ ಪಕ್ಷದ ನಾಯಕರಿಗೆ ಮುಖ್ಯಮಂತ್ರಿ ಅವರು ಸರಿಯಾಗಿಯೇ ತಿವಿದಿದ್ದಾರೆ. ಪ್ರತಿಪಕ್ಷಗಳ, ಟೀಕಾಕಾರರ ಮಾತಿಗೆ ತಲೆ ಕೆಡಿಸಿಕೊಳ್ಳದೇ ಈ ಎಲ್ಲ ಪ್ರಕರಣಗಳನ್ನು ಸಮಗ್ರವಾಗಿ ತನಿಖೆಗೆ ಒಳಪಡಿಸಿ, ತಪ್ಪಿತಸ್ಥರಿಗೆ ಕಾನೂನಿನ ಪಾಠ ಕಲಿಸಲು ಸರಕಾರ ಮುಂದಾಗಬೇಕಿದೆ.