Sunday, 15th December 2024

ನಮ್ಮವರ ರಕ್ಷಣೆ ಮೊದಲ ಆದ್ಯತೆ

ಯಾವುದೇ ದೇಶದಲ್ಲಿ ಯುದ್ಧವಾದರೂ, ಅಲ್ಲಿ ಕೇವಲ ಸೈನಿಕರ ಅಥವಾ ಯುದ್ಧದಲ್ಲಿ ಭಾಗವಹಿಸುವವರ ಸಾವು ನೋವಾಗುವುದಿಲ್ಲ. ಅದರಲ್ಲಿಯೂ ಗಡಿ ಪ್ರದೇಶದಿಂದ ಒಳನುಗ್ಗಿ ಊರುಗಳಲ್ಲಿ ನಡೆದರೆ ಸೈನಿಕರೊಂದಿಗೆ ಸಾಮಾನ್ಯರೂ ಕೊನೆಯುಸಿರು ಎಳೆಯುವುದು ಸಹಜ.

ಆದ್ದರಿಂದ ಇದೀಗ ಉಕ್ರೇನ್‌ನಲ್ಲಿ ಆರಂಭವಾಗಿರುವ ಯುದ್ಧದ ವಿಷಯದಲ್ಲಿ ಭಾರತ ಯಾವ ರೀತಿಯ ಧೋರಣೆ ತಾಳಲಿದೆ ಎನ್ನುವ ಬಗ್ಗೆ ಇಡೀ ವಿಶ್ವ ನೋಡುತ್ತಿದೆ. ಈಗಾಗಲೇ ತಟಸ್ಥ ನಿಲುವು ತಾಳಿದರೂ, ಪೂರ್ಣ ಪ್ರಮಾಣದ ಯುದ್ಧ ಘೋಷಣೆಯಾದ ಬಳಿಕದ ತೀರ್ಮಾನದ ಬಗ್ಗೆ ಕುತೂಹಲವಿದೆ. ಭಾರತ ಸರಕಾರ ವಿದೇಶಾಂಗ ನೀತಿ, ಅಂತಾರಾಷ್ಟ್ರೀಯ ಸಂಬಂಧವನ್ನು ನೋಡಿಕೊಂಡು ನಿಲುವು ತಾಳುವ ಮೊದಲು, ಯುದ್ಧಪೀಡಿತ ಉಕ್ರೇನ್‌ನಲ್ಲಿ ದೇಶದ ಸಾವಿರಾರು ವಿದ್ಯಾರ್ಥಿಗಳು ಸಿಲುಕಿಕೊಂಡಿ ದ್ದಾರೆ.

ಅದರಲ್ಲೂ ರಾಜ್ಯದ 180 ವೈದ್ಯಕೀಯ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ ಎಂಬ ವರದಿಯಾಗಿದೆ. ಅವರನ್ನು ವಾಪಸು ಕರೆಸಿ ಕೊಳ್ಳುವುದಕ್ಕೆ ತಂತ್ರ ರೂಪಿಸಬೇಕಿದೆ. ಸದ್ಯಕ್ಕೆ ಕೇಂದ್ರ ಸರಕಾರ ನೀಡುತ್ತಿರುವ ಸಂಖ್ಯೆಗಿಂತ ವಾಸ್ತವವಾಗಿ ಹೆಚ್ಚಿನ ಸಂಖ್ಯೆ ಯಲ್ಲಿ ವಿದ್ಯಾರ್ಥಿಗಳು ಇರಬಹುದು. ಅಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿಗಳ ಪೋಷಕರು ಆತಂಕಕ್ಕೆ ಒಳಗಾಗಿದ್ದು, ಎಲ್ಲರನ್ನೂ ಗುರುತಿಸಿ ಅವರನ್ನು ಕರೆತರುವ ಕೆಲಸ ಆಗಬೇಕಿದೆ. ಪ್ರತ್ಯೇಕತಾವಾದಿಗಳ ವಶದಲ್ಲಿ ರುವ ಎರಡು ಪ್ರದೇಶಗಳಲ್ಲಿ ರಷ್ಯಾ ಮಿಲಿಟರಿ ಕಾರ್ಯಾಚರಣೆ ಕೈಗೊಂಡಿರುವ ಹಿನ್ನೆಲೆಯಲ್ಲಿ ತನ್ನ ವಾಯುಪ್ರದೇಶದಲ್ಲಿ ವಿಮಾನ ಹಾರಾಟ ನಿರ್ಬಂಧಿಸಿರುವುದಾಗಿ ಉಕ್ರೇನ್ ಘೋಷಿಸಿದೆ. ಹೀಗಾಗಿ ಭಾರತೀಯರನ್ನು ಸ್ವದೇಶಕ್ಕೆ ಕರೆತರಲೆಂದು ಉಕ್ರೇನ್‌ಗೆ ಹಾರಿದ್ದ ಏರ್ ಇಂಡಿಯಾ ವಿಮಾನವು, ಅಲ್ಲಿಗೆ ತೆರಳಲಾಗದೇ ಹಿಂದಿರುಗಿದ್ದು, ಇದರಿಂದ ಪೋಷಕರಲ್ಲಿ ಮತ್ತಷ್ಟು ಆತಂಕಗೊಂಡಿದ್ದಾರೆ.

ಉಕ್ರೇನ್‌ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಸರಕಾರ ಸಮರೋಪಾದಿಯಲ್ಲಿ ಕ್ರಮ ಕೈಗೊಂಡಿದೆ. ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತವಾಗಿರಲು ಭಾರತೀಯ ರಾಯಭಾರ ಕಚೇರಿ ಸೂಕ್ತ ಮಾರ್ಗದರ್ಶನ ವನ್ನು ನೀಡಿದೆ. ಆದರೆ ವಿಮಾನಗಳು ಪುನಃ ಆರಂಭವಾಗುವವರೆಗೂ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರಲು ಬೇರೆ ಮಾರ್ಗವೇ ಇಲ್ಲದಂತಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ವಿದೇಶಾಂಗ ಕಾರ್ಯದರ್ಶಿಗಳೊಂದಿಗೆ ರಾಜ್ಯ ಸರಕಾರವೂ ನಿರಂತರ ಸಂಪರ್ಕ ದಲ್ಲಿದೆ.

ಹೀಗಾಗಿ ಪೋಷಕರು ಆತಂಕಗೊಳ್ಳದೆ ಧೈರ್ಯದಿಂದ ಇರಬೇಕಿದೆ. ಅಲ್ಲದೆ, ಇತಿಹಾಸದಲ್ಲಿ ಹಲವು ಬಾರಿ ಭಾರತ ಶಾಂತಿಪಾಲನಾ ಪಾತ್ರ ನಿರ್ವಹಿಸಿದೆ. ಹಾಗೆ ರಷ್ಯಾ-ಉಕ್ರೇನ್ ಸಂಘರ್ಷವನ್ನು ಅಂತ್ಯಗೊಳಿಸಲು ಭಾರತ ಮಧ್ಯಪ್ರವೇಶ ಮಾಡಬೇಕಿದೆ.