ಕೇಂದ್ರ ಸರಕಾರ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ೨೦೨೩ನೇ ಸಾಲಿನ ಪದ್ಮ ಪ್ರಶಸ್ತಿಗಳು ಅರ್ಹರಿಗೆ ಸಂದಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೆಮ್ಮೆಯ ಕನ್ನಡಿಗರಾದ ಹಿರಿಯ ಮುತ್ಸದ್ದಿ ಎಸ್.ಎಂ. ಕೃಷ್ಣ ಅವರಿಗೆ ಪದ್ಮವಿಭೂಷಣ, ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಮತ್ತು ಹಿರಿಯ ಸಮಾಜ ಸೇವಕಿ ಸುಧಾಮೂರ್ತಿ ಅವರಿಗೆ ಪದ್ಮಭೂಷಣ ಪ್ರಶಸ್ತಿಗಳು ಬಂದಿರುವುದು ಕನ್ನಡ ನಾಡಿಗೇ ಸಂದ ಗೌರವವಾಗಿದೆ.
ಪದ್ಮಶ್ರೀ ಪುರಸ್ಕೃತರಾಗಿರುವ ಕೊಡಗಿನ ನೃತ್ಯಗಾರ್ತಿ ರಾಣಿ ಮಾಚಯ್ಯ, ತಮಟೆ ಕಲಾವಿದ ಮುನಿವೆಂಕಟಪ್ಪ, ಹಿರಿಯ ಪುರಾತತ್ವ ಶಾಸಜ್ಞ ಎಸ್. ಸುಬ್ಬರಾಮನ್, ಕಲಾವಿದರಾದ ಶಾ ರಶೀದ್ ಅಹ್ಮದ್ ಖಾದ್ರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಾಧಕ ಖಾದರ್ ವಲಿ ದುಡೇಕುಲ ಅವರ ಸಾಧನೆಗಳೂ ಅಸಾಧಾರಣ. ಯಾವುದೇ ಅರ್ಜಿ, ಪ್ರಭಾವಗಳಿಲ್ಲದೆ ಕೇಂದ್ರ ಸರಕಾರವೇ ಅರ್ಹರನ್ನು ಗುರತಿಸಿ ಪ್ರಶಸ್ತಿಗಳನ್ನು ನೀಡುತ್ತಿರುವ ಪರಂಪರೆ ನಿಜಕ್ಕೂ ಪ್ರಶಸ್ತಿಯ ಗೌರವದ ಜತೆಗೆ ಪುರಸ್ಕೃತರ ಘನತೆ ಯನ್ನೂ ಹೆಚ್ಚಿಸಿದೆ.
ದೇಶದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಅಗ್ರಮಾನ್ಯವಾಗಿರುವ ಪದ್ಮ ಭೂಷಣ ನನಗೆ ಸಿಗುವ ಬಗ್ಗೆ ಯಾವುದೇ ಮಾಹಿತಿಯಿರಲಿಲ್ಲ. ನಾನು ಎಂದಿಗೂ ಪ್ರಶಸ್ತಿ, ಪುರಸ್ಕಾರಗಳ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ಪದ್ಮಭೂಷಣವನ್ನು ಕೇಂದ್ರ ಸರಕಾರ ನನಗೆ ನೀಡಿರುವ ಸಂತಸವಿದೆ ಹಾಗೂ ಸರಕಾರಕ್ಕೆ ಕೃತಜ್ಞಳಾಗಿದ್ದೇನೆ ಎಂಬ ಸುಧಾಮೂರ್ತಿ ಅವರ ಮಾತು ಶ್ಲಾಘನೀಯ. ಅಂತೆಯೇ ಅಷ್ಟು ದೊಡ್ಡ ಪ್ರಶಸ್ತಿಗೆ ಅರ್ಹನೇ ಎಂಬ ಆತಂಕ ಇತ್ತು. ಇದು ಬಯಸದೇ ಬಂದ ಭಾಗ್ಯ ಎಂದು ಹಿರಿಯ ಮುತ್ಸದ್ದಿ ಎಸ್.ಎಂ ಕೃಷ್ಣ ಅವರ ಪ್ರತಿಕ್ರಿಯೆ ಕೂಡ ವಿನಮ್ರತೆಯಿಂದ ಕೂಡಿದ್ದು ಏರಿದವನು ಚಿಕ್ಕವನಿರಬೇಕು ಎಂಬ ಸಂದೇಶವನ್ನು ಸಾರಿದ್ದಾರೆ.
ಸ್ವತಃ ಸರಸ್ವತೀ ಪುತ್ರರೇ ಆಗಿರುವ ಎಸ್.ಎಲ್ ಭೈರಪ್ಪನವರು ಕೂಡ ಪುರಸ್ಕಾರಕ್ಕೆ ಆಯ್ಕೆ ಮಾಡಿದ್ದಕ್ಕೆ ಮೋದಿ ನೇತೃತ್ವದ ಸರಕಾರಕ್ಕೆ ಕೃತಜ್ಞತೆ
ಹೇಳುತ್ತೇನೆ. ಮೋದಿ ಕಾರಣದಿಂದಲೇ ನನಗೆ ಇದು ದೊರೆತಿದೆ. ಇಲ್ಲದಿದ್ದರೆ ಬರುತ್ತಿರಲಿಲ್ಲ. ಪದ್ಮಭೂಷಣ ಪುರಸ್ಕಾರ ಸಿಕ್ಕಿದ್ದಕ್ಕಿಂತಲೂ, ನನ್ನ
ಪುಸ್ತಕಗಳನ್ನು ಲಕ್ಷಾಂತರ ಮಂದಿ ಓದಿ ಸಂತೋಷಪಟ್ಟಿರುವುದು ಹೆಚ್ಚಿನ ಖುಷಿ ಕೊಡುತ್ತದೆ. ನನ್ನ ನಂತರವೂ ನನ್ನ ಪುಸ್ತಕಗಳು ಬದುಕುತ್ತವೆಯೇ
ಎನ್ನುವುದು ಮುಖ್ಯವಾಗುತ್ತದೆ. ಹಾಗಾದಾಗ ಅದೇ ನಿಜವಾದ ಪ್ರಶಸ್ತಿ ಎಂದಿರುವುದು ಅವರ ಸೌಜನ್ಯದ ಪ್ರತೀಕ.
Read E-Paper click here