Sunday, 15th December 2024

ಪಂಚಾಯತ್ ರಾಜ್: ಗಟ್ಟಿಗೊಳಿಸಿ

ಶಾಸಕರಿಗೆ, ಸಂಸದರಿಗೆ ಗ್ರಾಮೀಣ ಭಾಗದಲ್ಲಿರುವ ಸಮಸ್ಯೆಗಳು ಗಮನಕ್ಕೆ ಬರುವುದಿಲ್ಲ, ಒಂದು ವೇಳೆ ಬಂದರೂ ಅವುಗಳನ್ನು ಪರಿಹರಿಸುವ ಸಾಧ್ಯತೆ ತೀರ ಕಡಿಮೆ ಎಂಬ ಉದ್ದೇಶದಿಂದ ದೇಶದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಜಾರಿ ಮಾಡಲಾಗಿದೆ.

ಆದರೆ ಚೆಕ್‌ಗಳಿಗೆ ಸಹಿ ಮಾಡುವ ಅಧಿಕಾರವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಿಂದ ಕಿತ್ತುಕೊಂಡು ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ (ಪಿಡಿಒ) ನೀಡಲು ಸರಕಾರ ಮುಂದಾಗಿದ್ದು, ಆ ಮೂಲಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಹುದ್ದೆಯನ್ನು ನಿಷ್ಕ್ರೀಯ ಗೊಳಿಸಲು ಸಿದ್ಧತೆ ನಡೆದಿದೆ.

ಪ್ರಸ್ತುತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ನಿರ್ಮಾಣಕ್ಕೆ ಪರವಾನಗಿ ನೀಡುವುದು, ಇ-ಆಸ್ತಿ, ವಾಣಿಜ್ಯ ಕಟ್ಟಡ ಕಾಮಗಾರಿ, ಕೈಗಾರಿಕೆ, ಮಳಿಗೆ, ಹೋಟೆಲ್ ಹಾಗೂ ಇತರ ವಾಣಿಜ್ಯ ವಹಿವಾಟುಗಳಿಗೆ ಪರವಾನಗಿ ನೀಡುವ ಕುರಿತು ಗ್ರಾಮ ಪಂಚಾಯಿತಿ ಸದಸ್ಯರ ಸಾಮಾನ್ಯ ಸಭೆಯಲ್ಲಿ ನಿರ್ಧಾರ ತಳೆಯಲಾಗುತ್ತಿದೆ. ಈ ಅಧಿಕಾರವನ್ನೂ ಪಿಡಿಒಗೆ ವಹಿಸುವ ಹಾಗೂ ಪರವಾನಗಿ ನೀಡಿದ ಬಳಿಕ ಈ ವಿಚಾರವನ್ನು ಗ್ರಾಮ ಪಂಚಾಯಿತಿ ಸದಸ್ಯರ ಗಮನಕ್ಕೆ ತರುವ ಪ್ರಸ್ತಾವವನ್ನು ಸರಕಾರ ಸಿದ್ಧಪಡಿಸಿದೆ.

ಆ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಯನ್ನು ದುರ್ಬಲಗೊಳಿಸುವುದಕ್ಕೆ ಕೈ ಹಾಕಲಾಗಿದೆ. ಅಲ್ಲದೆ, ೧೫ನೇ ಹಣಹಾಸು
ಆಯೋಗದ ನಿಽಯಿಂದ ಗ್ರಾಮ ಪಂಚಾಯಿತಿಗಳಿಗೆ ಹಂಚಿಕೆ ಆಗುವ ಅನುದಾನವನ್ನು ಪ್ರತಿವರ್ಷ ಶೇ.೧೦ರಷ್ಟು ಹೆಚ್ಚಳ ಮಾಡಲಾಗುತ್ತಿತ್ತು. ಆದರೆ, ಈಗ ಈ ಅನುದಾನವನ್ನೂ ಶೇ.೨೦ರಷ್ಟು ಕಡಿತ ಮಾಡಲಾಗಿದೆ. ಅನುದಾನ ಬಳಕೆಗೆ ಅನೇಕ ನಿರ್ಬಂಧಗಳನ್ನೂ ವಿಧಿಸಲಾಗಿದೆ.

ಪಂಚಾಯಿತಿ ಕಟ್ಟಡಗಳಲ್ಲಿ ಸೌರ ಫಲಕಗಳನ್ನು ಅಳವಡಿಸುವ ? ೫ ಲಕ್ಷದವರೆಗಿನ ಕಾಮಗಾರಿಗಳಿಗೆ ಸ್ಥಳೀಯ ಟೆಂಡರ್ ಕರೆದು ಕಾಮಗಾರಿ ಅನುಷ್ಠಾನ ಮಾಡುವ ಬದಲು, ರಾಜ್ಯಮಟ್ಟದ ಟೆಂಡರ್ ಕರೆಯಲಾಗಿದೆ. ಅಲ್ಲದೆ, ತಾಲೂಕು ಪಂಚಾಯಿತಿ
ಮತ್ತು ಜಿ ಪಂಚಾಯಿತಿ ಚುನಾವಣೆಗಳನ್ನೂ ಕ್ಷೇತ್ರಗಳ ಮರುವಿಂಗಡಣೆ ಹಾಗೂ ಮೀಸಲು ನೆಪ ಹೇಳಿ ಎರಡು ವರ್ಷಗಳಿಂದ ಮುಂದೂಡಲಾಗಿದೆ.

ಈ ಎಲ್ಲವನ್ನೂ ಗಮನಿಸದರೆ ಗ್ರಾಮ ಪಂಚಾಯಿತಿಗಳ ಅಽಕಾರ ಮೊಟಕುಗೊಳಿಸುವ ಹುನ್ನಾರ ನಡೆದಿದೆ. ಸ್ಥಳೀಯ ಸರಕಾರ ವನ್ನು ಬಲಗೊಳಿಸ ಬೇಕಿರುವ ಸರಕಾರದ ಈ ನಡೆಯು ಜನರಲ್ಲಿ ಅನುಮಾನ ಮೂಡುವಂತೆ ಮಾಡಿದೆ. ಆದ್ದರಿಂದ ಸರಕಾರ ಈ ನಿರ್ಧಾರದಿಂಧ ಹಿಂದೆ ಸರಿದು, ಪಂಚಾಯತ್ ರಾಜ್ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಹೆಜ್ಜೆ ಇಡಬೇಕು.