Sunday, 15th December 2024

ವಿಧಾನ ಪರಿಷತ್ ಬೇಕೇ?

ಒಂದು ಕಾಲದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸೋತು ವಿಧಾನ ಪರಿಷತ್ ಸ್ಥಾನ ಗಿಟ್ಟಿಸಿಕೊಳ್ಳುವ ಮೂಲಕ ರಾಜಕೀಯ ಮರುಜನ್ಮ ಪಡೆದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರೇ ‘ವಿಧಾನ ಪರಿಷತ್ ನಮಗೆ ಅವಶ್ಯವೇ?’ ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ.

ಪರಿಷತ್‌ನ ಗಾಂಭೀರ್ಯತೆಯನ್ನು ಚೆನ್ನಾಗಿ ಅರಿತಿರುವ ಅವರಿಗೆ ಈಗ ವಿಧಾನ ಪರಿಷತ್ ಸ್ಥಾನ ಅಷ್ಟೇನೂ ಮಹತ್ವದ್ದಲ್ಲ ಎನಿಸಿರಬಹುದು. ಒಂದು ಕಾಲದಲ್ಲಿ ಮುತ್ಸದ್ದಿಗಳು, ಚಿಂತಕರು ಹಾಗೂ ಬುದ್ಧಿಜೀವಿಗಳಿಗೆ ಮೀಸಲಾಗಿದ್ದ ವಿಧಾನ ಪರಿಷತ್ ಎನ್ನುವ ಮೇಲ್ಮನೆ ಸ್ಥಾನವು ಈಗ ಕುಟುಂಬದವರ, ಹಣವುಳ್ಳವರ ಪಾಲಾ ಗಿದೆ ಎಂಬುದು ಗುಟ್ಟಾಗೇನೂ ಉಳಿದಿಲ್ಲ. ಈಗೀಗ ವಿಧಾನ ಪರಿಷತ್ ಸದಸ್ಯ ಸ್ಥಾನ ಕೊಂಡುಕೊಳ್ಳುವ ಖುರ್ಚಿಯಾಗಿದೆ ಅನೇಕ ಸಂದರ್ಭಗಳಲ್ಲಿ ಈ ರಾಜ್ಯದ ಜನ ಗಮನಿಸಿದ್ದಾರೆ. ಇತ್ತೀಚೆಗೆ ಅಲ್ಲಿ ನಡೆಯುವ ಚರ್ಚೆಗಳು ಹಾಸ್ಯಾಸ್ಪದವಾಗಿವೆ. ಹೀಗಾಗಿ ಅದರ ಮಹತ್ವವೇ ಕಳೆಗುಂದುತ್ತಾ ಸಾಗಿದೆ.

ಅನೇಕ ರಾಜಕೀಯ ನಾಯಕರಿಗೆ, ವಿಧಾನಸಭೆ ಚುನಾವಣೆಯಲ್ಲಿ ಸೋತವರಿಗೆ, ಪಕ್ಷಕ್ಕಾಗಿ ದುಡಿದವರಿಗೆ ಕೊಡಮಾಡುವ ಸ್ಥಾನವಾಗಿ ಮಾರ್ಪಟ್ಟಿದೆ. ಸಂವಿಧಾನದಲ್ಲಿ ಪರಿಷತ್ ರಚನೆ ಕಡ್ಡಾಯ ಮಾಡಿಲ್ಲವಾದರೂ ರಾಜಕೀಯ ಪಕ್ಷಗಳು ತಮ್ಮ ಹಿಂಬಾಲಕರಿಗೆ ಸ್ಥಾನಮಾನ ಕೊಡಲು ಅದನ್ನು ರಚಿಸಿ, ಮುಂದುವರಿಸಿಕೊಂಡು ಹೋಗುತ್ತಿವೆ. ಹೀಗಾಗಿ ಇದೀಗ ಈಶ್ವರಪ್ಪ ಅವರು ಎತ್ತಿರುವ ಪ್ರಶ್ನೆ ಗಂಭೀರವಾಗಿದ್ದು, ಆ ಕುರಿತು ಸದನ ಸದಸ್ಯರೆಲ್ಲರೂ ಅವಲೋಕನ ಮಾಡಿಕೊಳ್ಳಬೇಕಿದೆ.

ಆಯಾ ಕ್ಷೇತ್ರಗಳಿಂದ ಚುನಾಯಿತರಾದ ಪರಿಷತ್ ಸದಸ್ಯರು ಆಯಾ ಕ್ಷೇತ್ರಗಳ ಅಭಿವೃದ್ಧಿಗೆ ಕೊಟ್ಟಿರುವ ಕೊಡುಗೆ ಏನು ಎಂಬ ಬಗ್ಗೆ ಚರ್ಚೆಯಾಗಬೇಕಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ವಿಧಾನ ಪರಿಷತ್ ಅನ್ನು ರದ್ದುಗೊಳಿಸಲಾಗಿದೆ. ಪರಿಷತ್ತಿನ ಅಸ್ತಿತ್ವದ ಅಗತ್ಯ ಅಥವಾ ಅನಗತ್ಯದ ಕುರಿತು ವಿಧಾನಸಭೆಯಲ್ಲಿ ವ್ಯಾಪಕ ಚರ್ಚೆ ನಡೆಯಲಿ. ಇದು ಕೇವಲ ಕುಟುಂಬಸ್ಥರಿಗೆ, ಧನಬಲ ಇರುವವರಿಗೆ ವೇದಿಕೆಯಾಗುವುದಕ್ಕಿಂತ ವಿಸರ್ಜನೆಯಾಗುವುದು ಉತ್ತಮ.