ಮುಂದಿನ ವಾರ (ಜುಲೈ ೨೬) ಆರಂಭಗೊಳ್ಳಲಿರುವ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲಿರುವ ಭಾರತೀಯ ಆಟಗಾರರ ಪಟ್ಟಿಯನ್ನು ಅಂತಿಮ ಗೊಳಿಸಲಾಗಿದೆ. ದೇಶದ ೧೧೭ ಕ್ರೀಡಾಪಟುಗಳು ಮತ್ತು ೧೪೦ ಸಹಾಯಕ ಸಿಬ್ಬಂದಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಭಾರತ ತಂಡ ಈ ವರ್ಷ ಹಿಂದೆಂದಿಗಿಂತಲೂ ಹೆಚ್ಚಿನ ಪದಕ ಗೆಲ್ಲುವ ವಿಶ್ವಾಸದೊಂದಿಗೆ ಪ್ಯಾರಿಸ್‌ಗೆ ಪಯಣ ಬೆಳೆಸುತ್ತಿದೆ.
ನೀರಜ್ ಚೋಪ್ರಾ ಸೇರಿದಂತೆ ಕಳೆದ ವರ್ಷ ಪದಕ ಗೆದ್ದ ಐವರು ಈ ಬಾರಿ ಮತ್ತೆ ಸ್ಥಾನ ಪಡೆದಿದ್ದಾರೆ. ಅಥ್ಲೆಟಿಕ್ಸ್ ತಂಡದಲ್ಲಿ ಈ ಬಾರಿ ೧೧ ಮಹಿಳೆಯರು ಮತ್ತು ೧೮ ಪುರುಷರ ಸಹಿತ ೨೯ ಮಂದಿ ದೇಶವನ್ನು ಪ್ರತಿನಿಧಿಸಲಿದ್ದಾರೆ. ಭಾರತದ ಪಾಲಿಗೆ ಒಲಿಂಪಿಕ್ಸ್ ಕ್ರೀಡಾಕೂಟ ಇನ್ನೂ ಗಗನ ಕುಸುಮ. ಹಾಕಿಯಲ್ಲಿ ೧೯೨೮ರಿಂದ ೧೯೫೬ ರವರೆಗೆ ಸತತ ಆರು ಚಿನ್ನದ ಪದಕಗಳ ಸಹಿತ ಹನ್ನೆರಡು ಒಲಿಂಪಿಕ್ಸ್‌ನಲ್ಲಿ ಹನ್ನೊಂದು ಬಾರಿ ಪದಕಗಳನ್ನು ಗೆದ್ದಿರುವುದಷ್ಟೇ ನಮ್ಮ ಹೆಗ್ಗಳಿಕೆ.
ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಒಂದೂ ಪದಕ ಗೆಲ್ಲದೆ ವಾಪಸ್ಸಾದ ಉದಾಹರಣೆಗಳಿವೆ. ಕಳೆದ ಬಾರಿಯ ಟೋಕಿಯೋ ಒಲಿಂಪಿಕ್ಸ್ ನಲ್ಲಿ ೧೧೯ ಭಾರತೀಯ ಅಥ್ಲೀಟ್‌ಗಳು ಭಾಗವಹಿಸಿ ೧ ಚಿನ್ನ ಸಹಿತ ಏಳು ಪದಕ ಗೆದ್ದು ೪೭ನೇ ಸ್ಥಾನ ಪಡೆದಿದ್ದು ಇದುವರೆಗಿನ ಉತ್ತಮ ನಿರ್ವಹಣೆ. ವಿಶೇಷ ಎಂದರೆ ೧೨೪ ವರ್ಷಗಳ ಹಿಂದೆ ಭಾರತ ಪ್ಯಾರಿಸ್‌ನಿಂದಲೇ ತನ್ನ ಒಲಿಂಪಿಕ್ಸ್ ಅಭಿಯಾನ ಆರಂಭಿಸಿತ್ತು. ೧೯೦೦ರ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಭಾರತವನ್ನು ಪ್ರತಿನಿಧಿಸಿದ ಏಕೈಕ ಕ್ರೀಡಾ ಪಟು ನಾರ್ಮನ್ ಪ್ರಿಟ್ಚರ್ಡ್ ಅಥ್ಲೆಟಿಕ್ಸ್‌ನಲ್ಲಿ ಎರಡು ಬೆಳ್ಳಿಯ ಪದಕಗಳನ್ನು ಜಯಿಸಿದ್ದರು.
ಅಂದಿನಿಂದ ಇದುವರೆಗೆ ನಾವು ಗೆದ್ದ ಒಟ್ಟು ಪದಕಗಳ ಸಂಖ್ಯೆ ಕೇವಲ ೩೫. ಅಂದರೆ ವಿಶ್ವ ಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ಸಾಧನೆ ಎಷ್ಟು ನೀರಸ ಎನ್ನುವುದು ಇದರಿಂದಲೇ ತಿಳಿಯುತ್ತದೆ. ಮೂರು ದಶಕಗಳ ಹಿಂದಿನವೆರಗೂ ಒಲಿಂಪಿಕ್ಸ್‌ನಲ್ಲಿ ಐರೋಪ್ಯ ರಾಷ್ಟ್ರಗಳದ್ದೇ ಪ್ರಾಬಲ್ಯವಾಗಿತ್ತು. ಆದರೆ
ಈಗ ಚೀನಾ, ದ.ಕೊರಿಯಾ, ಜಪಾನ್ ಮುಂತಾದ ರಾಷ್ಟ್ರಗಳು ಯೂರೋಪ್ ಪ್ರಾಬಲ್ಯಕ್ಕೆ ಸಡ್ಡು ಹೊಡೆದು ಪದಕ ಕೊಳ್ಳೆ ಹೊಡೆಯುತ್ತಿವೆ. ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕ ರಾಷ್ಟ್ರವಾಗಲು ಹೊರಟಿರುವ ಭಾರತವೂ ಈ ದಿಶೆಯಲ್ಲಿ ಹೆಚ್ಚಿನ ಸಾಧನೆ ಮಾಡಬೇಕಾಗಿದೆ.
ಹಿಂದಿನ ದಿನಗಳಿಗೆ ಹೋಲಿಸಿದರೆ ಸರಕಾರ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ನಮ್ಮ ಮಕ್ಕಳಿಗೆ ಎಳವೆಯಲ್ಲಿಯೇ ಕ್ರೀಡಾಸಕ್ತಿ ಬೆಳೆಸಿ, ಅವರ ಸಾಧನೆಗೆ ಒತ್ತಾಸೆಯಾಗಿ ನಿಂತರೆ ನಾವೂ ಚೀನಾದಂತೆ ಈ ಕ್ರೀಡಾಕೂಟದಲ್ಲಿ ಪಾರಮ್ಯ ಸಾಧಿಸಬಹುದು.