Saturday, 14th December 2024

ಗುಂಡಿ ಮುಚ್ಚುವುದೇ ಕೆಲಸವಲ್ಲ

ಕೆಂಪೇಗೌಡರ ಪ್ರತಿಮೆ ಅನಾವರಣಗೊಳಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮನದ ಹಿನ್ನೆಲೆ ಬೆಂಗಳೂರು ನಗರದಲ್ಲಿ ಗುಂಡಿ ಬಿದ್ದಿದ್ದ ನಾನಾ ರಸ್ತೆಗಳಿಗೆ ಬಿಬಿಎಂಪಿ ಯಿಂದ ಹೊಸದಾಗಿ ಡಾಂಬರೀಕರಣ ಮಾಡಲಾಗಿತ್ತು.

ಆದರೆ ಡಾಂಬರೀಕರಣ ಮಾಡಿದ ಕೆಲವೇ ಗಂಟೆಗಳಲ್ಲಿ ಆ ರಸ್ತೆಯ ಟಾರ್ ಕಿತ್ತುಬಂದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಹಿಂದೆಯೂ ಪ್ರಧಾನಿ ಯವರು ಅಂಬೇಡ್ಕರ್ ಸ್ಕೂಲ್ ಆ- ಎಕನಾಮಿಕ್ಸ್‌ನ ಹೊಸ ಕಟ್ಟಡ ಉದ್ಘಾಟಿಸಲು ಬರುವ ಮೊದಲೂ ರಸ್ತೆಯನ್ನು ಹೀಗೆಯೇ ರಾತ್ರೋರಾತ್ರಿ ದುರಸ್ತಿ ಮಾಡಲಾಗಿತ್ತು. ಮೋದಿ ಅವರು ಅತ್ತ ದೆಹಲಿ ತಲುಪುವ ಮೊದಲೇ ಇತ್ತ ದುರಸ್ತಿಯಾದ ರಸ್ತೆಯಲ್ಲಿ ಮತ್ತೆ ಗುಂಡಿ ಬಿದ್ದಿತ್ತು.

ಕೋಟ್ಯಂತರ ರುಪಾಯಿ ಖರ್ಚು ಮಾಡಿ ನಿರ್ಮಿಸಿದ ರಸ್ತೆಗಳು ತಿಂಗಳು ಕಳೆಯುವುದರಲ್ಲೇ ಹದಗೆಟ್ಟು ಹೋಗಲು ಹಲವು ಕಾರಣಗಳು ಇವೆ. ನಗರದ ರಸ್ತೆಗಳ ಕೆಳಗೆ ವಿದ್ಯುತ್, ದೂರವಾಣಿ ಕೇಬಲ್‌ಗಳು, ನೀರು ಸರಬರಾಜು, ಒಳಚರಂಡಿ ಮಾರ್ಗಗಳು ಇವೆ. ದುರಸ್ತಿ ಮಾಡಿದ ರಸ್ತೆಯನ್ನು ಸಮನ್ವಯದ ಕೊರತೆಯಿಂದ ಸರಕಾರದ ಒಂದಿಂದು ಇಲಾಖೆಯು ಅಗೆಯುತ್ತಲೇ ಇರುತ್ತದೆ. ಇವೆಲ್ಲದಕ್ಕಿಂತ ಮೊದಲು ಕಳಪೆ ಕಾಮಗಾರಿಯೂ ಪದೇ ಪದೇ ಗುಂಡಿಗಳು ಕಾಣಿಸಿಕೊಳ್ಳಲು ಕಾರಣ.

ಗುಂಡಿ ಮುಚ್ಚುವಾಗ ಅದನ್ನು ಮೊದಲು ಚೌಕಾಕಾರವಾಗಿ ಕೊರೆದುಕೊಳ್ಳಬೇಕು. ಒಳಗಿನ ದೂಳನ್ನು ಪೂರ್ಣ ತೆಗೆಯಬೇಕು. ರಸ್ತೆ ಮೇಲ್ಮೈಗೆ ಸಮತಟ್ಟಾಗಿರುವಂತೆ ಗುಣಮಟ್ಟದ ಟಾರನ್ನೂ ಹಾಕಬೇಕು ಎಂಬ ಮಾರ್ಗಸೂಚಿ ಇದೆ. ಆದರೆ, ಈ ಯಾವ ನಿಯಮವೂ ಬೆಂಗಳೂರಿನಲ್ಲಿ ಪಾಲನೆಯಾಗುತ್ತಿಲ್ಲ. ಹೀಗಾಗಿಯೇ ಗುಂಡಿಗಳೇ ಬೀಳದಂತೆ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿಲ್ಲ.

ಇನ್ನು ಯಾವುದೇ ರಸ್ತೆಯನ್ನು ಬಿಬಿಎಂಪಿಯಿಂದ ದುರಸ್ತಿ ಮಾಡಿಸಿದಾಗ, ಆ ಕಾಮಗಾರಿ ನಡೆಸಿದ ಗುತ್ತಿಗೆದಾರರು ಎರಡು ವರ್ಷ ಆ ರಸ್ತೆಯನ್ನು ನಿರ್ವಹಣೆ ಮಾಡಬೇಕು ಎಂಬ ಷರತ್ತು ವಿಧಿಸಲಾಗಿರುತ್ತದೆ. ಗುತ್ತಿಗೆದಾರರಿಂದ ರಸ್ತೆಗಳ ನಿರ್ವಹಣೆ ಸರಿಯಾಗಿ ನಡೆದಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುವುದು ಪಾಲಿಕೆ ಎಂಜಿನಿಯರ್‌ಗಳ ಹೊಣೆ. ಆದರೆ ಗುತ್ತಿಗೆದಾರರು ಮತ್ತು ಎಂಜಿನಿಯರ್‌ಗಳು ರಸ್ತೆ ಮಾಡಿದ ಬಿಲ್ ಪಾಸ್ ಆದ ನಂತರ ಅದಕ್ಕೂ ತಮಗೂ ಸಂಬಂಧವಿಲ್ಲ ಎಂಬಂತೆ ವರ್ತಿಸುವುದರಿಂದ ನಗರದ ರಸ್ತೆಗಳ ಪರಿಸ್ಥಿತಿ ಹೀಗಿದೆ.