Saturday, 14th December 2024

ಕಾಶ್ಮೀರ ಕಣಿವೆಯಲ್ಲಿ ಶಾಂತಿ ನೆಲೆಸಲಿ

ಕಾಶ್ಮೀರ ಕಣಿವೆಯಲ್ಲಿ ಲಷ್ಕರ್-ಎ-ತಯಬಾ ಸೇರಿದಂತೆ ಉಗ್ರ ಸಂಘಟನೆಗಳು ಇತ್ತೀಚೆಗೆ 8 ಮಂದಿಯನ್ನು ಹತ್ಯೆ ಮಾಡಿವೆ. ಇದರಲ್ಲಿ ಮುಸ್ಲಿಮೇತರರು, ಭದ್ರತಾ ಸಿಬ್ಬಂದಿ, ಒಬ್ಬ ಕಲಾವಿದ ಹಾಗೂ ಸ್ಥಳೀಯ ನಾಗರಿಕರು ಸೇರಿದ್ದಾರೆ.

1990ರಲ್ಲಿ ಕೇಂದ್ರದಲ್ಲಿ ತೃತೀಯ ರಂಗ ಆಡಳಿತದಲ್ಲಿತ್ತು, ಎಡಪಂಥೀಯ ಚಿಂತನೆ ಗಳಿದ್ದವು, ಮತಾಂಧರಿಗೆ ಸರಕಾರದ ಸಹಕಾರವಿತ್ತು. ಹೀಗಾಗಿ ಆಗ ಕಾಶ್ಮೀರಿ ಪಂಡಿತರ ಹತ್ಯೆ ನಿಲ್ಲಲಿಲ್ಲ ಎನ್ನಲಾಗಿದೆ.

ಆದರೆ ಈಗ ಕೇಂದ್ರದಲ್ಲಿ ಬಲಪಂಥೀಯ ಚಿಂತನೆಗಳುಳ್ಳ ಸಂಪೂರ್ಣ ಬಹುಮತದ ಬಿಜೆಪಿ ಸರಕಾರವೇ ಇದ್ದರೂ ಉಗ್ರರ ಅಟ್ಟಹಾಸ ನಿಲ್ಲುತ್ತಿಲ್ಲವೆಂದಾದರೆ ಏನು ಅರ್ಥ? ಭಾರತದಲ್ಲಿ ಸೋಷಿಯಲ್ ಮೀಡಿಯಾ, ಅಡ್ವಾನ್ಸ್ಡ್ಡಿಜಿಟಲ್ ಟೆಕ್ನಾಲಜಿ, ಸೇನೆಗೆ ದುಪ್ಪಟ್ಟು ಬಲ, ಸರಕಾರದ ಪರ ನಿಲ್ಲುವ ಮಾಧ್ಯಮಗಳು ಎಲ್ಲ ಇದ್ದಾಗಲೂ ಉಗ್ರ ಚಟುವಟಿಕೆ ನಡೆಯುತ್ತಲೇ ಇರುವುದೇಕೆ? ನಿತ್ಯ ನಿರಂತರವಾಗಿ ನಡೆಯುತ್ತಿರುವ ಮುಸ್ಲಿಮೇತರರ ಹತ್ಯೆಯನ್ನು ತಡೆಯುವಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಫಲ ವಾಯಿತೇ? ಎಂದು ಸಾಮಾನ್ಯ ಜನರೂ ಮಾತನಾಡಿಕೊಳ್ಳುವಂತಾಗಿದೆ.

ಆರ್ಟಿಕಲ್ 370 ತೆಗೆದುಬಿಟ್ಟರೆ ಎಲ್ಲವೂ ಸರಿ ಹೋಗಿ ಬಿಡುತ್ತದೆ ಎಂದು ಭಾವಿಸಿದವರಿಗೆ ಇತ್ತೀಚಿನ ಬೆಳವಣಿಗೆಗಳು ತೀವ್ರ ಬೇಸರ ತರಿಸುತ್ತಿವೆ. ಜಮ್ಮು ಕಾಶ್ಮೀರ ವಿಷಯದಲ್ಲಿ ಕೇಂದ್ರ ಸರಕಾರ ಯಾವತ್ತೂ ಮೈಮರೆತಿಲ್ಲ, ಮೈ ಮರೆಯಲೂ ಬಾರದು. ಅಲ್ಲಿನ ಭಯೋ ತ್ಪಾದಕ ಸಂಘಟನೆಗಳ ಮೂಲವನ್ನು ಹುಡುಕಿ ನಿರ್ನಾಮ ಮಾಡಬೇಕು. ಇವರಿಗೆ ತರಬೇತಿ ನೀಡುವ ಸಂಸ್ಥೆಗಳು, ಶಸ್ತ್ರಾಸ್ತ್ರ ಬರುವ ದಾರಿಗಳು, ಅವರಿಗೆ ಆರ್ಥಿಕ ಸಹಾಯ ನೀಡುವವರನ್ನು ಸಹ ಹುಡುಕಬೇಕಿದೆ.

ನಿರಪರಾಧಿಗಳ ಮೇಲೆ ನಡೆಯುವ ಈ ದೌರ್ಜನ್ಯಕ್ಕೆ ಕಾರಣವಾಗಿರುವ ಭಯೋತ್ಪಾದಕ ಚಟುವಟಿಕೆಗಳನ್ನು ಮಟ್ಟ ಹಾಕಲೇಬೇಕು. ಈವರೆಗಿನ ವಿಧ್ವಂಸಕ ಕೃತ್ಯಗಳನ್ನು ನೋಡಿದರೆ, ದೇಶದ ಕಾನೂನಿಗೆ ಭಯೋತ್ಪಾದಕರು ಕವಡೆಕಾಸಿನ ಕಿಮ್ಮತ್ತನ್ನೂ ಕೊಟ್ಟಿಲ್ಲದಿರು ವುದು ಅರಿವಿಗೆ ಬರುತ್ತದೆ. ಕಾನೂನಿನ ಭಯ ಅವರಲ್ಲಿ ಮೂಡಬೇಕು. ದೇಶದ್ರೋಹಿಗಳಿಗೆ ಯಾವುದೇ ರೀತಿ ರಿಯಾಯಿತಿ ತೋರಿಸದೆ ಬಗ್ಗುಬಡಿಯಬೇಕಿದೆ. ಪರೋಕ್ಷವಾಗಿ ಇವರಿಗೆ ನೆರವಾಗುವ ಸ್ಥಳೀಯರ ವಿರುದ್ಧ ಕಾನೂನಿನ ಅನ್ವಯ ಕ್ರಮ ಜರುಗಿಸಬೇಕು. ಭಯೋ ತ್ಪಾದನೆಯನ್ನು ಸಂಪೂರ್ಣವಾಗಿ ಮಟ್ಟ ಹಾಕುವ ಮೂಲಕ ಕಾಶ್ಮೀರ ಕಣಿವೆಯಲ್ಲಿ ಶಾಂತಿ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು.