Saturday, 14th December 2024

ಪ್ಲಾಸ್ಟಿಕ್ ನಿಷೇಧಕ್ಕೆ ಕೈಜೋಡಿಸಿ

ದೇಶದ ಸಂವಿಧಾನದಲ್ಲಿ ನಾಗರಿಕರ ಅನುಕೂಲಕ್ಕಾಗಿಯೇ ಅನೇಕ ಕಾನೂನುಗಳಿವೆ. ಆ ಕಾನೂನುಗಳಿಗೆ ಬೆಲೆ ಬರುವುದು ಅವುಗಳು
ಸಮರ್ಪಕವಾಗಿ ಅನುಷ್ಠಾನವಾದಾಗ ಮಾತ್ರ. ಇದೀಗ ಏಕಬಳಕೆ ಪ್ಲಾಸ್ಟಿಕ್ ಅನ್ನು ಜುಲೈ ೧ರಿಂದ ನಿಷೇಽಸಿ ಕೇಂದ್ರ ಸರಕಾರ ಸುತ್ತೋಲೆ ಹೊರಡಿಸಿದೆ.

ಆದರ ಜನರು ಅದನ್ನು ಎಷ್ಟರಮಟ್ಟಿಗೆ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ ಎಂಬುದೇ ಪ್ರಶ್ನೆ ಯಾಗಿದೆ. ಒಂದು ಬಾರಿ ಉಪಯೋಗಿಸುವ ಎಲ್ಲ ಪ್ಲಾಸ್ಟಿಕ್ ಉತ್ಪನ್ನಗಳು ಕರ್ನಾಟಕದಲ್ಲಿ ೨೦೧೬ರ ನಿಷೇಧಕ್ಕೆ ಒಳಗಾಗಿದ್ದವು. ಇದರಲ್ಲಿ, ಪ್ಲಾಸ್ಟಿಕ್ ಕೊಟ್ಟೆ, ಗ್ಲಾಸ್, ಪ್ಲೇಟ್, ಚಮಚ, ಸ್ಟ್ರಾ, ಕ್ಯಾಂಡಿ ಕಡ್ಡಿಗಳು ಎಲ್ಲವೂ ಸೇರಿದ್ದವು. ಆದರೆ ಆದೇಶವು ಬಿಗಿಯಾಗಿ ಅನುಷ್ಠಾನಗೊಳ್ಳದ ಕಾರಣ ಮಹಾನಗರಗಳ ಹೊರವಲಯದಲ್ಲಿ ಪ್ಲಾಸ್ಟಿಕ್ ಪರ್ವತಗಳೇ ಸೃಷ್ಟಿಯಾದವು.

ಪ್ಲಾಸ್ಟಿಕ್ ನಿಷೇಧದ ವಿಚಾರದಲ್ಲಿ ಸರಕಾರ ಮತ್ತು ಸಾರ್ವಜನಿಕರ ಪಾತ್ರ ಮುಖ್ಯವಾಗಿದೆ. ಸರಕಾರ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿ ದರಷ್ಟೇ ಸಾಲದು, ಆ ಪ್ಲಾಸ್ಟಿಕ್ ತಯಾರಿಕಾ ಕಾರ್ಖಾನೆಗಳನ್ನೂ ಮುಚ್ಚಿಸಬೇಕು. ಇಲ್ಲವಾದಲ್ಲಿ ವ್ಯಾಪಾರಿಗಳೇ ಬಲಿಪಶುಗಳಾಗು ತ್ತಾರೆ. ಸಾವಿರಾರು ರುಪಾಯಿಯ ದಂಡ ತೆರುವುದು ಅನಿವಾರ್ಯವಾಗುತ್ತದೆ. ಇಲ್ಲವೇ ಅಲ್ಲಲ್ಲಿ ಪ್ರಕರಣವನ್ನು ಮುಚ್ಚಿ ಹಾಕಲು ಲಂಚ ನೀಡಬೇಕಾಗುತ್ತದೆ. ಹೀಗಾದಲ್ಲಿ ಈ ಪ್ಲಾಸ್ಟಿಕ್ ನಿಷೇಧದ ಸುತ್ತೋಲೆಯೇ ದಂಡ ಎಂದು ಭಾವಿಸಬೇಕಾಗುತ್ತದೆ. ಬಟ್ಟೆ ಚೀಲ, ಬಿದಿರಿನ ಉತ್ಪನ್ನಗಳು, ವಿವಿಧ ಸಾವಯವ ವಸ್ತುಗಳಿಂದ ತಯಾರಿಸಿದ ಕೈಚೀಲಗಳನ್ನು ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಬಳಕೆಗೆ ರೂಢಿಯಲ್ಲಿ ತರಬೇಕಿದೆ. ಈಶಾನ್ಯ ರಾಜ್ಯಗಳಲ್ಲಿ ಇತ್ತೀಚೆಗೆ ಬಿದಿರಿನ ನೀರಿನ ಬಾಟಲಿಗಳನ್ನು ತಯಾರಿಸುತ್ತಿದ್ದಾರೆ.

ಮಣ್ಣಿನಲ್ಲಿ ವೇಗವಾಗಿ ಕರಗಬಲ್ಲಂತಹ ಧಾನ್ಯಾಧಾರಿತ ತೆಳು ಚೀಲಗಳನ್ನು ಕೆಲ ದೇಶಗಳಲ್ಲಿ ತಯಾರಿಸುತ್ತಿದ್ದಾರೆ. ಪರ್ಯಾಯ ಚಿಂತನೆಗಳಿಗೆ, ಆವಿಷ್ಕಾರಗಳಿಗೆ ತೆರೆದುಕೊಳ್ಳುವ ಮನಸ್ಸಿದ್ದರೆ ಹಾಗೂ ಸರಕಾರಗಳ ಒತ್ತಾಸೆಯಿದ್ದರೆ, ಹಳ್ಳಿ ಹಳ್ಳಿಗಳಲ್ಲೂ ಪ್ಲಾಸ್ಟಿಕ್ಕಿಗೆ
ಪರ್ಯಾಯವಾದ ಉತ್ತಮ ಉತ್ಪನ್ನಗಳನ್ನು ತಯಾರಿಸುವ ಪಡೆಯನ್ನೇ ಸಜ್ಜುಗೊಳಿಸಬಹುದು. ಇದರಿಂದ ನಿರುದ್ಯೋಗ ಸಮಸ್ಯೆಯೂ ಕೊಂಚ ಮಟ್ಟಿಗೆ ತಗ್ಗುತ್ತದೆ.

ಏಕೋಪಯೋಗಿ ಪ್ಲಾಸ್ಟಿಕ್ ನಿಷೇಧವನ್ನು ನಾಗರಿಕರೆಲ್ಲರೂ ಸ್ವಾಗತಿಸಿ, ಮುಂದಿನ ದಿನಗಳಲ್ಲಿ ಎಲ್ಲ ತರಹದ ಪ್ಲಾಸ್ಟಿಕ್ ನಿಷೇಧ ಮಾಡುವ ಉಪಕ್ರಮಗಳಿಗೂ ಸರಕಾರದ ಜತೆ ಕೈಜೋಡಿಸಬೇಕು. ಆಗ ಮಾತ್ರ ಸ್ವಚ್ಛ ಭಾರತದ ಕಲ್ಪನೆ ಸಾಕಾರಗೊಳ್ಳಲು ಸಾಧ್ಯ.