Sunday, 15th December 2024

ನೈತಿಕ ಪೊಲೀಸ್‌ಗಿರಿಯ ಅಪಾಯ ತಡೆಯಬೇಕು

ಇತ್ತೀಚಿಗೆ ಧಾರ್ಮಿಕ ಭಾವನೆಗಳನ್ನು ಬಂಡವಾಳವನ್ನಾಗಿಟ್ಟುಕೊಂಡು ನೈತಿಕ ಪೊಲೀಸ್‌ಗಿರಿ ಮಾಡುವವರ ಮೇಲೆ ಕಡಿವಾಣ ಹಾಕುವ ಅನಿವಾರ್ಯತೆ ರಾಜ್ಯ ಸರಕಾರದ ಮುಂದಿದೆ. ಕಚೇರಿಯಿಂದ ಪರಿಚಿತರೊಬ್ಬರ ಜತೆ ಬೈಕ್‌ನಲ್ಲಿ ಬರುತ್ತಿದ್ದ ಮಹಿಳೆಯನ್ನು ಪ್ರಶ್ನಿಸಿ, ಆತನ ಮೇಲೆ ಹಲ್ಲೆ ಮಾಡಿದ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧನ ಮಾಡಿದ್ದಾರೆ. ಇಂತಹ ವಿಷಯದಲ್ಲಿ ಕಾನೂನು ಕಠಿಣವಾಗಿ ವರ್ತಿಸುತ್ತದೆ ಎಂದು ಸಿಎಂ ಬೊಮ್ಮಾಯಿ ಅವರು ಕೂಡ ತಿಳಿಸಿದ್ದಾರೆ. ಪ್ರತಿ ವಿಚಾರಕ್ಕೂ ಧರ್ಮದ ಅಮಲು ನೆತ್ತಿಗೇರಿಸಿಕೊಂಡು ವರ್ತನೆ ಮಾಡುವ ಅವಿವೇಕಿಗಳ ಮೇಲೆ ಕಾನೂನು ಸರಿಯಾಗಿ ಕೆಲಸ ಮಾಡ ದಿದ್ದರೆ, ಮುಂದಿನ ದಿನಗಳಲ್ಲಿ ಪರಸ್ಪರ ಬರೆಯುವಿಕೆ, ಜತೆಯಾಗಿ ಕೆಲಸ ಮಾಡುವುದು, ಸಹಜವಾಗಿ ಧಾರ್ಮಿಕತೆಯನ್ನು ಮರೆತು ಮನುಷ್ಯತ್ವದಿಂದ ಒಂದಾಗಿರುವ ಪ್ರಸಂಗಗಳಿಗೆ ಕಡಿವಾಣ ಬೀಳಬಹುದು.

ಬೆಂಗಳೂರಿನ ಘಟನೆಯಲ್ಲಿ ಮುಸ್ಲಿಂ ಯುವಕರ ವರ್ತನೆ, ಮಂಗಳೂರಿನಲ್ಲಿ ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿ ಹೋಗುತ್ತಿದ್ದಳು ಎಂದು ಬಸ್ ನಿಲ್ಲಿಸಿ ಹುಡುಕಾಟ ನಡೆಸಿದ ಪ್ರಸಂಗ, ಇವೆಲ್ಲವೂ ಸಮಾಜ ವನ್ನು ದುಸ್ಥಿತಿಯೆಡೆಗೆ ಕೊಂಡೊಯ್ಯುವ ತೀರ್ಮಾನಗಳು. ಸರಕಾರ ಮತ್ತು ಕಾನೂನು ಈ ನೆಲದ
ಕಾನೂನಿನ ಅನ್ವಯ ಕ್ರಮ ತೆಗೆದುಕೊಂಡು, ಇಂಥಹ ಘಟನೆಗಳು ಮರು ಕಳಿಸದಂತೆ ನೋಡಿಕೊಳ್ಳಬೇಕು. ಸಧ್ಯದ ಪರಿಸ್ಥಿತಿಯಲ್ಲಿ ಪೊಲೀಸರ ಕ್ರಮ ಸಮಾಧಾನ ತರುವಂತಿದ್ದು, ಮುಂದೆ ಇಂತಹ ಪ್ರಕರಣಗಳು ನಡೆಯದಂತೆ ತಡೆಯಬೇಕಾದುದು, ಸರಕಾರ ಮತ್ತು ಪೊಲೀಸ್ ಇಲಾಖೆಯ ಕರ್ತವ್ಯವಾಗಿದೆ.

ಬದುಕಿನಲ್ಲಿ ಧರ್ಮ ಎಂಬುದು ಪರಸ್ಪರ ಸೌಹಾರ್ದತೆಗೆ ಮೂಲವಾಗಬೇಕೆ ಹೊರತು, ಪರಸ್ಪರ ಅಪನಂಬಿಕೆಗೆ ಆಸ್ಪದ ಕೊಡುವಂತಾಗಬಾರದು. ನಾಳೆ ಅದೆಂತಹ ಸ್ಥಿತಿಯಲ್ಲಿಯಲ್ಲಿದ್ದರೂ, ಅನ್ಯಧರ್ಮೀಯರಿಗೆ ಸಹಾಯ ಮಾಡಲು ಹಿಂದೇಟು ಹಾಕುವ ಪರಿಸ್ಥಿತಿ ಸಮಾಜದಲ್ಲಿ ನಿರ್ಮಾಣವಾಗುವ ಮಟ್ಟಿಗೆ ಇಂತಹ ಬೆಳವಣಿಗೆಗಳು ಕಾರಣವಾಗುತ್ತವೆ. ಈ ಹಿನ್ನೆಲೆಯಲ್ಲಿ ಇಂತಹ ನೈತಿಕ ಪೊಲೀಸ್ ಗಿರಿಯನ್ನು ತಡೆಯುವ ನಿಟ್ಟಿನಲ್ಲಿ ಸರಕಾರ, ಪೊಲೀಸ್ ಮತ್ತು ಧಾರ್ಮಿಕ ಪ್ರಜ್ಞಾವಂತರು ಕೂಡ ಕೆಲಸ ಮಾಡಬೇಕಿದೆ.