ದೇಶದಲ್ಲಿ ಕರೋನಾ ನಿವಾರಣೆಗೆ ಲಸಿಕೆ ತಯಾರಾಗುತ್ತಿದ್ದಂತೆ ಅದರ ಸಮರ್ಪಕ ವಿಲೇವಾರಿ ಹಾಗೂ ವಿತರಣೆಗೆ ಕೇಂದ್ರ
ಸರಕಾರ ತಯಾರಿ ನಡೆಸಿದೆ.
ಲಸಿಕೆ ಆಗಮನಕ್ಕೂ ಮೊದಲೇ ಈ ರೀತಿಯಾದ ಪೂರ್ವ ತಯಾರಿ ನಡೆಸಿರುವುದರಿಂದ ಕೇಂದ್ರ ಸರಕಾರದ ಬಗ್ಗೆ ಪ್ರಶಂಸೆ
ವ್ಯಕ್ತವಾಗುತ್ತಿದೆ. ಹೀಗೆ ಮೆಚ್ಚುಗೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಕೆಲವು ರಾಜ್ಯಗಳ ಚುನಾವಣೆ ಪ್ರಣಾಳಿಕೆಗಳಿಂದಾಗಿ ಒಂದೆಡೆ ಕರೋನಾ ಲಸಿಕೆಯ ವಿಷಯಕ್ಕೆ ರಾಜಕೀಯ ಸೋಂಕು ತಗುಲಿದ್ದು, ಆರೋಪ – ಪ್ರತ್ಯಾರೋಪಗಳು ಮುಂದುವರಿದಿವೆ.
ದೇಶದ ಜನತೆ ಆರೋಗ್ಯ ಸುರಕ್ಷತೆಯ ವಿಷಯ ರಾಜಕೀಯ ಸಂಗತಿಯಾಗಿ ಮಾರ್ಪಟ್ಟಿರುವುದು ದುರಂತ. ರಾಜ್ಯ ಸರಕಾರಗಳು
ಲಸಿಕೆ ಪಡೆಯಲು ತಮ್ಮದೇ ಹಾದಿ ತುಳಿಯದಂತೆ ಕೇಂದ್ರ ಸರಕಾರ ಸೂಚಿಸಿದೆ. ಆದರೆ ಬಿಹಾರ ವಿಧಾನಸಭಾ ಚುನಾವಣೆಯ
ಮತದಾನಕ್ಕೂ ಮುನ್ನ ತನ್ನ ಪ್ರಣಾಳಿಕೆಯಲ್ಲಿ ಬಿಹಾರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಉಚಿತವಾಗಿ ಕರೋನಾ ಲಸಿಕೆ ನೀಡುವುದಾಗಿ ಹೇಳಿದೆ. ಈ ನಡೆಗೆ ಆಕ್ರೋಶ ವ್ಯಕ್ತವಾಗುತ್ತಿದೆ.
ಜತೆಗೆ ಸಮರ್ಥನೆಯೂ ಮುಂದುವರಿದಿದೆ. ಬಿಹಾರದ ಜನತೆಗೆ ಲಸಿಕೆ ಉಚಿತವಾಗಿ ದೊರಕುವಂತೆ ಮಾಡುವ ಪಕ್ಷದ ಭರವಸೆ
ಕಾನೂನುಬದ್ಧವಾಗಿದ್ದು. ಇದರಲ್ಲಿ ರಾಜಕೀಯ ಹುಡುವುದು ಸರಿಯಲ್ಲ ಎಂದು ಕೇಂದ್ರ ದೂರ ಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಕೋವಿಡ್‌ನಂಥ ಮಹಾಮಾರಿಯ ಕಾಲದಲ್ಲಿ ಆರೋಗ್ಯ ಸೇವೆ ಆದ್ಯತೆಯಾಗಬೇಕು. ಬಿಹಾರದ ಜನತೆಗೆ ಬಗ್ಗೆ ಅಲ್ಲಿನ ಸರಕಾರಕ್ಕಿರುವ ಕಾಳಜಿಯನ್ನು ಇದು ತೋರಿಸುತ್ತದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಈ ವಿಷಯದ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಅಸಮಾಧಾನ ವ್ಯಕ್ತಪಡಿಸಿರುವುದರಿಂದ ರಾಜ್ಯದಲ್ಲಿಯೂ ಆರೋಪ – ಪ್ರತ್ಯಾರೋಪ ಗಳು ಆರಂಭಗೊಂಡಿವೆ. ಜನರ ಆರೋಗ್ಯ ಕಾಳಜಿಯ ಲಸಿಕೆಯೊಂದು ರಾಜಕೀಯ ವಸ್ತುವಾಗಿ ಮಾರ್ಪಟ್ಟಿದೆ.