Saturday, 14th December 2024

ಸಾಂಸ್ಕೃತಿಕ ರಾಜಕೀಯದಿಂದ ಅಕಾಡೆಮಿಗಳು ಮುಕ್ತವಾಗಲಿ

ದೇಶದ ಬಹುತೇಕ ಸಾಂಸ್ಕೃತಿಕ ಅಕಾಡೆಮಿಗಳು ಕೆಲವೇ ಕೆಲವು ಶಕ್ತಿಗಳ ಕಪಿಮುಷ್ಟಿಯಲ್ಲಿ ಸಿಲುಕಿ ತಮ್ಮ ಪಾವಿತ್ರ್ಯವನ್ನು
ಕಳೆದುಕೊಂಡಿದೆಯಲ್ಲದೇ ತಮ್ಮ ಮೂಲ ಉದ್ದೇಶವನ್ನೇ ಮರೆತಿವೆ. ಆರಂಭದಿಂದಲೂ ಅಕಾಡೆಮಿಗಳನ್ನು ಒಂದು ನಿರ್ದಿಷ್ಟ ಸೈದ್ಧಾಂತಿಕ ಪಂಗಡದವರ ಜಹಗೀರು ಎಂಬಂತೆ ಮಾಡಿಕೊಂಡು ತಮ್ಮತಮ್ಮಲ್ಲೇ ಪ್ರಶಸ್ತಿ ಪುರಸ್ಕಾರಗಳನ್ನು ವಿನಿಮಯ ಮಾಡಿ ಕೊಳ್ಳುವ ಒಳ ಒಪ್ಪಂದದ ಲಾಬಿ ಚಾಲ್ತಿಯಲ್ಲಿದೆ. ಪ್ರಬಲ ರಾಜಕೀಯ ಶಕ್ತಿಗಳ ಕೃಪಾ ಪೋಷಿತ ‘ಬುದ್ಧಿಜೀವಿ’ಗಳ ಹಿಡಿತದಲ್ಲಿ ಅವು, ತಮ್ಮ ಸಾಂಸ್ಕೃತಿಕ, ಸಾಹಿತ್ಯಕ ಸ್ವಾಯ ತ್ತತೆಯನ್ನು ಕಳೆದುಕೊಂಡಿರುವುದು ಗುಟ್ಟಾಗಿ ಉಳಿದಿಲ್ಲ.

‘ಸಮಾನಮನಸ್ಕ’ರೆನಿಸಿಕೊಂಡಿರುವ ವ್ಯಕ್ತಿಗಳ ಕೃತಿಗಳು ಮಾತ್ರ ತಥಾಕಥಿತ ವಿಮರ್ಶಕರ ಶ್ಲಾಘನೆಗೆ ಒಳಗಾಗಿ, ಅವರಿಂದಲೇ ಮುನ್ನಡಿ, ಬೆನ್ನುಡಿ ಗಳನ್ನು ಬರೆಸಿಕೊಂಡು, ಅಂಥ ವರೇ ಸರದಿಯ ಮೇಲೆ ಸದಸ್ಯರು, ಅಧ್ಯಕ್ಷ ರಾಗಿರುವ ಅಕಾಡೆಮಿ, ಆಯ್ಕೆ ಸಮಿತಿಗಳಲ್ಲಿ ಶಾರ್ಟ್‌ಲಿಸ್ಟ್ ಆಗಿ ಪುರಸ್ಕಾರ ಗಳನ್ನು ಪಡೆಯುತ್ತಿವೆ. ಇದಕ್ಕೆ ದೊಡ್ಡ ಮಟ್ಟದ ಎಲ್ಲ ರೀತಿಯ ‘ಕಪ್ಪಕಾಣಿಕೆ’ ಸಲ್ಲಿಸಬೇಕೆಂಬ ಅಲಿಖಿತ ನಿಯಮವಿರುವುದು ಕೇವಲ ಪ್ರಶಸ್ತಿ ವಂಚಿತರ ಆರೋಪವಲ್ಲ.

ಋಣ ಸಂದಾಯ ಇಷ್ಟಕ್ಕೇ ಮುಗಿಯುವುದಿಲ್ಲ. ನಂತರದ ಸರದಿಯಲ್ಲಿ ಸಮಿತಿಯ ಸದಸ್ಯತ್ವ ಪಡೆಯುವ ‘ಮಹಾನ್ ಲೇಖಕರು’ ತಮಗೆ ಪ್ರಶಸ್ತಿ ನೀಡಲು ಕಾರಣರಾದ ಸೋಕಾಲ್ಡ್ ಚಿಂತಕರ ಕೃತಿಗೆ ಪ್ರಶಸ್ತಿ ಘೋಷಿಸುವ ಮೂಲಕ, ‘ಸಾಲ ಮರುಪಾವತಿ’ ಮಾಡುವುದು ದಶಕಗಳಿಂದ ನಡೆದುಕೊಂಡು ಬಂದಿರುವ ಪದ್ಧತಿ. ಪ್ರತಿಷ್ಠಿತ ಖಾಸಗಿ ಪ್ರಶಸ್ತಿ-ಪುರಸ್ಕಾರಗಳ ಆಯ್ಕೆ ಸಮಿತಿ ಮೇಲೂ ಒತ್ತಡ ಹೇರಿ, ‘ಇಂಥವರಿಗೇ ಸಲ್ಲಬೇಕು, ಇಂಥವರಿಗೆ ಸಲ್ಲಲೇಬಾರದು’ ಎನ್ನುವಷ್ಟು ಇವರ ‘ಪ್ರಭಾವಿ ಬಾಹುಗಳು’ ಕೆಲಸ ಮಾಡುತ್ತಿವೆ ಎಂಬುದು ದುರಂತ.

ಇನ್ನೊಂದೆಡೆ ಈ ರೀತಿಯ ‘ವಿಜೇತರು’ ಕೆಲ ಸಂಕೀರ್ಣ ಸನ್ನಿವೇಶಗಳಲ್ಲಿ ‘ಪ್ರಶಸ್ತಿ ವಾಪ್ಸಿ’ ಕೂಗೆಬ್ಬಿಸುವ ಮೂಲಕ ಸರಕಾರ ವನ್ನೂ ಬ್ಲಾಕ್‌ಮೇಲ್ ಮಾಡುವ ತಂತ್ರಕ್ಕೆ ಇಳಿಯುವುದೂ ಹೆಚ್ಚುತ್ತಿದೆ. ಒಲಿಂಪಿಕ್ ವಿಜೇತ ಕುಸ್ತಿಪಟುಗಳು ಕೇಂದ್ರ ಸರಕಾರದ ಕ್ರೀಡಾ-ಪದ್ಮ ಪುರಸ್ಕಾರಗಳನ್ನು ಗಂಗೆಗೆ ಎಸೆಯಲು ಮುಂದಾಗಿದ್ದೂ ಇಂಥ ತಂತ್ರಗಾರಿಕೆಗೊಂದು ಇತ್ತೀಚಿನ ಉದಾಹರಣೆ ಯಷ್ಟೆ.

ಇಂಥ ಶಕ್ತಿಗಳೇ ಮುಖ್ಯಮಂತ್ರಿಯವರು ಯಾವ ಕಾರ್ಯಕ್ರಮಕ್ಕೆ ಹೋಗಬಾರದು, ಪ್ರಧಾನಿಯೊಂದಿಗೆ ಯಾರು ವೇದಿಕೆ ಹಂಚಿ ಕೊಳ್ಳಬಾರದು ಎಂಬುದರ ಬಗೆಗೂ ಸೆಲೆಬ್ರಿಟಿಗಳೆಂದು ಕೊಳ್ಳುವವರ ಬಾಯಲ್ಲಿ ಹೇಳಿಸಿ, ಒತ್ತಡ ತರುವ ಕೆಲಸವನ್ನೂ ಮಾಡು ತ್ತವೆ. ಈ ಎಲ್ಲ ಹಿನ್ನೆಲೆಯಲ್ಲಿ ಅವುಗಳ ಮೇಲಿನ ನಿಯಂತ್ರಣಕ್ಕಾಗಿ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಕ್ಷೇತ್ರದ ಸಂಸ ದೀಯ ಸ್ಥಾಯಿ ಸಮಿತಿ ಇತ್ತೀಚೆಗೆ ‘ರಾಷ್ಟ್ರೀಯ ಅಕಾಡೆಮಿಗಳು ಮತ್ತು ಇತರ ಸಾಂಸ್ಕೃತಿಕ ಸಂಸ್ಥೆಗಳ ಕಾರ್ಯನಿರ್ವಹಣೆ’ ಬಗೆಗೆ ಕೆಲ ಮಹತ್ವದ ಸಲಹೆಗಳನ್ನು ಶಿಫಾರಸು ಮಾಡಿದೆ.

‘ಸಾಂಸ್ಕೃತಿಕ ರಾಜಕೀಯ’ವನ್ನು ನಿರ್ಬಂಧಿಸಿ ಅರ್ಹರಿಗೆ ಗೌರವ ಸಲ್ಲುವಂತಾಗುವ ನಿಟ್ಟಿನಲ್ಲಿ ಈ ಶಿಫಾರಸು ಮಹತ್ವಪೂರ್ಣ. ಇನ್ನು ಮುಂದೆ ಪ್ರಶಸ್ತಿಗಳನ್ನು ಸ್ವೀಕರಿಸುವವರು ಅದಕ್ಕೂ ಮುನ್ನ ತಾವು ಪಡೆಯುವ ಪ್ರಶಸ್ತಿಗಳನ್ನು ರಾಜಕೀಯ ಕಾರಣಕ್ಕಾಗಿ ಮರಳಿಸುವುದಿಲ್ಲ ಎಂದು ಲಿಖಿತ ಹೇಳಿಕೆ ನೀಡಬೇಕೆಂಬುದು ಶಿಫಾರಸುಗಳಲ್ಲೊಂದು. ‘ಚಿಂತಕರ’ ಹೆಸರಿನಲ್ಲಿ ಪಾರ್ಟ್‌ಟೈಮ್ ರಾಜಕೀಯಕ್ಕಿಳಿಯವ, ಪರೋಕ್ಷ ವಾಗಿ ಶೈಕ್ಷಣಿಕ, ಸಾಹಿತ್ಯಕ, ಸಾಂಸ್ಕೃತಿಕ ಸಂಸ್ಥೆಗಳ ಮೇಲೆ ಪ್ರಭುತ್ವ ಸಾಧಿಸುತ್ತ ಬಂದಿರುವ, ವ್ಯಕ್ತಿಗತ ಚಾರಿತ್ರ್ಯವೆಂಬುದನ್ನೇ ಮರೆತಿರುವ ಇಂಥವರಿಂದ ಅಕಾಡೆಮಿಗಳನ್ನು ಮುಕ್ತವಾಗಿಸಿ, ಪ್ರಜಾಸತ್ತಾತ್ಮಕ ಚೌಕಟ್ಟಿನೊಳಗೆ ಸ್ವಾಯತ್ತವಾಗಿ ಅವು ಉಳಿಯುವಂತೆ ಮಾಡುವುದು ಇಂದಿನ ತುರ್ತು.