ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದು, ಇದೊಂದು ಹೇಯ ಕೃತ್ಯ, ಖಂಡನೀಯ.
ಹಿಂದೂ ಸಮೂಹವು ಬಿಜೆಪಿ ಪಕ್ಷದ ಮೇಲೆ ಬಹುದೊಡ್ಡ ಭರವಸೆ ಇಟ್ಟಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದರೂ ಹಿಂದೂ ಕಾರ್ಯ ಕರ್ತರ ಕೊಲೆಗಳು ಆಗುತ್ತಲೇ ಇವೆ ಎಂಬ ಕಾರಣಕ್ಕೆ ಸಹಜವಾಗಿಯೇ ಸರಕಾರದ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. ರಾಜ್ಯ ಸರಕಾರವೂ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಿದ್ದು, ಪೊಲೀಸರು ಶೀಘ್ರದಲ್ಲೇ ಆರೋಪಿಗಳ ಹೆಡೆಮುರಿ ಕಟ್ಟಲಿದ್ದಾರೆ.
ಹೀಗಾಗಿ ಪ್ರವೀಣ್ ಹತ್ಯೆ ವಿಚಾರದಲ್ಲಿ ಯಾರೂ ಉದ್ವೇಗಕ್ಕೊಳಗಾಗ ಬಾರದು. ಆರೋಪಿಗಳ ಬಂಧನದ ನಂತರ ಎಲ್ಲ ಪ್ರಕರಣಗಳಂತೆ ಈ ಪ್ರಕರಣದ ಆರೋಪಿಗಳನ್ನು ಸಹ ಬಂಧಿಸಿ, ಜೈಲಿನಲ್ಲಿ ಒಳ್ಳೆಯ ಊಟ, ಮೊಬೈಲ್ ಕೊಟ್ಟು ಸಾಕಬಾರದು. ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಣ್ಯ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಉತ್ತರ ಪ್ರದೇಶದ ಯೋಗಿ ಆದಿತ್ಯ ನಾಥ್ ಸರಕಾರದ ಮಾದರಿಯಲ್ಲಿ ದುಷ್ಕರ್ಮಿಗಳ ಬುಡಕ್ಕೇ ಕೈ ಹಾಕಿದರೆ ಮಾತ್ರ ಇಂತಹ ಪ್ರಕರಣಗಳನ್ನು ತಡೆಯಲು ಸಾಧ್ಯ.
ಇಲ್ಲವಾದರೆ ಧರ್ಮಾಂಧತೆಯ ಕೊಲೆಗಳು ಮರುಕಳಿಸುತ್ತಲೇ ಇರುತ್ತವೆ ಮತ್ತು ಸರಕಾರದ ಮಾನ ಬೀದಿಯಲ್ಲಿ ಹರಾಜಾಗುತ್ತಲೇ ಇರುತ್ತದೆ. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಾಹಿತಿ ಕುಂ.ವೀರಭದ್ರಪ್ಪ, ಬಿ.ಟಿ.ಲಲತಾ ನಾಯಕ ಸೇರಿದಂತೆ ಹಲವರಿಗೆ ಕೆಲ ದಿನಗಳಿಂದ ಜೀವಬೆದರಿಕೆ ಪತ್ರಗಳು ಬರುತ್ತಿವೆ. ರಾಜ್ಯ ಸರಕಾರ ಆ ಕುರಿತೂ ಗಂಭೀರವಾಗಿ ತನಿಖೆ ಮಾಡುವ ಮೂಲಕ ಪತ್ರ ಬೆದರಿಕೆ ಜಾಲವನ್ನು ಪತ್ತೆ ಹಚ್ಚಿ, ಆರೋಪಿ ಗಳನ್ನು ಜೈಲಿಗೆ ತಳ್ಳಬೇಕು. ಇಲ್ಲವಾದರೆ, ಶಾಂತಿ, ಸೌಹಾರ್ದತೆ, ಸಹಿಷ್ಣುತೆಯ ಬೀಡು ಎಂದೆಲ್ಲ ಹೆಸರು ಪಡೆದಿರುವ ಕರ್ನಾಟಕದ ಹೆಸರು ಜಾಗತಿಕ ಮಟ್ಟದಲ್ಲೂ ಹಾಳಾಗುತ್ತದೆ.
ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಅವುಗಳು ಚರ್ಚೆಗೆ ಸೀಮಿತವಾಗಿರಬೇಕೆ ಹೊರತು ಪ್ರಾಣ ತೆಗೆಯುವ ಮಟ್ಟಕ್ಕೆ ಹೋಗಬಾರದು ಎಂಬುದನ್ನು ಎಡ, ಬಲ ಪಂಥದವರು ಅರಿತು ಬದುಕಬೇಕು