Thursday, 12th December 2024

ಬೆಲೆ ಏರಿಕೆ ನಿಯಂತ್ರಿಸಿ

ತರಕಾರಿ ಸೇರಿದಂತೆ ಆಹಾರ ವಸ್ತುಗಳ ಬೆಲೆ ಏರಿಕೆ ಮಿತಿಮೀರಿರುವುದು ಅತ್ಯಂತ ಅಪಾಯಕಾರಿ ವಿದ್ಯಮಾನ. ಕೇಂದ್ರ ಮತ್ತು ರಾಜ್ಯದಲ್ಲಿನ
ಆಡಳಿತಾರೂಢರು ಇದನ್ನು ಯಾವ ಕಾರಣಕ್ಕೂ ನಿರ್ಲಕ್ಷಿಸುವಂತಿಲ್ಲ.

ಆರ್ಥಿಕತೆಯ ಮೇಲೆ ಇದು ನೇರ ಪರಿಣಾಮ ಬೀರುತ್ತದೆ. ಜನರ ಅವಶ್ಯಕತೆಯ ಹೆಚ್ಚಳ, ಏರುತ್ತಿರುವ ಜನಸಂಖ್ಯೆ, ಹೆಚ್ಚಿದ ಕೊಳ್ಳುವ ಶಕ್ತಿ ಮತ್ತು ಆದಾಯ ಇವೆಲ್ಲವನ್ನೂ ಬೇಡಿಕೆ ಅವಲಂಬಿಸಿರುತ್ತದೆ. ಬೇಡಿಕೆ ಹೆಚ್ಚಾದಂತೆಲ್ಲ ಅದಕ್ಕೆ ತಕ್ಕ ಪೂರೈಕೆ ಇಲ್ಲದಾಗ ಬೆಲೆ ಏರುತ್ತದೆ ಎಂಬುದು ಮಾರುಕಟ್ಟೆಯ ಪ್ರಾಥಮಿಕ ಸಂಗತಿ. ಹೀಗಾಗಿ ಈ ಹಂತದಲ್ಲಿ ಉತ್ಪಾದಕ ಮತ್ತು ಬಳಕೆದಾರನ ನಡುವಿನ ಕಂದಕವನ್ನು ಮುಚ್ಚುವ ಕೆಲಸ ತಕ್ಷಣಕ್ಕೆ ಆಗಬೇಕಿದೆ. ಭೂಮಿಯ ಫಲವತ್ತತೆಯ ಕುಸಿತ, ಹವಾಮಾನ ವೈಪರೀತ್ಯ, ಮುಂಗಾರು ವ್ಯತ್ಯಯ, ರೋಗಗಳು ಇತ್ಯಾದಿ ಕಾರಣಗಳಿಂದಾಗಿ ಆಹಾರ ಉತ್ಪಾದನೆಯೂ ಕುಸಿತ ಕಂಡಿದೆ.

ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವವರು ಹಾಗೂ ಬೇಸಾಯದಲ್ಲಿನ ಹೂಡಿಕೆಯೂ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದು ಗಂಭೀರ ಸಂಗತಿ. ದೇಶದ ಕೃಷಿರಂಗದ ಅಭಿವೃದ್ಧಿಯ ದರ ಶೇ.೩ನ್ನೂ ದಾಟಿಲ್ಲ. ಇವೆಲ್ಲದರ ನಡುವೆ ಸರಕಾರಗಳ ನಾನಾ ಉಚಿತ ಯೋಜನೆ ಗಳಿಂದಾಗಿಯೂ ಗ್ರಾಹಕರ ಕೊಳ್ಳುವ ಶಕ್ತಿ ಹೆಚ್ಚಿರುವುದು ಬೇಡಿಕೆಯನ್ನು ಇಮ್ಮಡಿ ಗೊಳಿಸಿದೆ. ಇದೇ ಸಂದರ್ಭದಲ್ಲಿ ವಿದ್ಯುತ್, ಪೆಟ್ರೋಲ್ ದುಬಾರಿಯಾಗಿದೆ.

ಇವೆಲ್ಲವೂ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಲು ಕಾರಣ. ಇದಕ್ಕಿರುವ ಶಾಶ್ವತ ಪರಿಹಾರವೆಂದರೆ ಆಹಾರ ಉತ್ಪಾದನೆಯನ್ನು ಹೆಚ್ಚಿಸುವುದು. ಆದರೆ, ಇದು ತಕ್ಷಣಕ್ಕೆ ಆಗುವ ಮಾತಲ್ಲ. ಅಂಥ ದೀರ್ಘಕಾಲೀನ ಕ್ರಮಗಳನ್ನು ಸೂಕ್ತ ಪ್ರೋತ್ಸಾಹಕ ನೀತಿಯ ಮೂಲಕ ಕೈಗೊಳ್ಳಬೇಕು. ಅದೇ ಸಂದರ್ಭದಲ್ಲಿ ತುರ್ತು ಕ್ರಮವಾಗಿ ಸರಕಾರ ಆಹಾರ ಧಾನ್ಯಗಳು ಮತ್ತು ಹಣ್ಣು-ತರಕಾರಿಗಳ ರಫ್ತನ್ನು ನಿಷೇಧಿಸಬೇಕು. ಜತೆಗೆ ಮಧ್ಯವರ್ತಿಗಳ
ಹಸ್ತಕ್ಷೇಪವಿಲ್ಲದೆ ಸೂಕ್ತ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಸರಕಾರಿ ಗೋದಾಮುಗಳಲ್ಲಿರುವ ಧಾನ್ಯಗಳನ್ನು ಮುಕ್ತ ಮಾರುಕಟ್ಟೆಗೆ ಮತ್ತು ಪಡಿತರ
ವ್ಯವಸ್ಥೆಗೆ ತಕ್ಷಣ ಬಿಡುಗಡೆ ಮಾಡಬೇಕು. ಆಮದಾಗುವ ವಸ್ತುಗಳ ಮೇಲಿನ ಶುಲ್ಕವನ್ನು ಶೇ.೧೦ ಕ್ಕಿಂತ ಕಡಿಮೆ ಮಾಡಿ, ಆವಕ ಹೆಚ್ಚಿಸಬೇಕು. ಮಾರುಕಟ್ಟೆ ವ್ಯವಸ್ಥೆಯಲ್ಲಿ ಬದಲಾವಣೆ ತೀರಾ ಅವಶ್ಯಕ.

ಎಪಿಎಂಸಿಯಂಥ ಏಕಸ್ವಾಮ್ಯ ವ್ಯವಸ್ಥೆ ತಪ್ಪಿಸಿ, ಪರ್ಯಾಯ ಮಾರುಕಟ್ಟೆ ವ್ಯವಸ್ಥೆಯನ್ನು ಪ್ರೋತ್ಸಾಹಿಸಬೇಕು. ದಳಿಗಳು-ಮಧ್ಯವರ್ತಿಗಳನ್ನು ದೂರ ಇಡಬೇಕು. ಎಲ್ಲ ಆಹಾರ ವಸ್ತುಗಳನ್ನು ತೆರಿಗೆ ಮತ್ತು ಶುಲ್ಕಗಳಿಂದ ಮುಕ್ತಗೊಳಿಸಬೇಕು. ಸಹಕಾರಿ ವಲಯವನ್ನು ಪೋತ್ಸಾಹಿಸುವ ಕಾರ್ಯ ಇನ್ನಷ್ಟು ಆದಲ್ಲಿ, ಆಗಾಗ ಕಾಡುವ ಬೆಲೆ ಏರಿಕೆ ಕಾಟದಿಂದ ಮುಕ್ತಿ ಸಾಧ್ಯ.