Sunday, 15th December 2024

ಬೆಲೆ ಏರಿಕೆ ಜನಸಾಮಾನ್ಯರಿಗೆ ಬರೆ

ಲೋಕಸಭೆ ಚುನಾವಣೆಯು ಪೂರ್ಣಗೊಂಡ ಬೆನ್ನಲ್ಲೇ ರಾಜ್ಯದಲ್ಲಿ ಬೆಲೆ ಏರಿಕೆ ಶಕೆ ಆರಂಭವಾಗಿದೆ. ರಾಜ್ಯಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಚಿಲ್ಲರೆ ಮಾರಾಟ ದರವನ್ನು ಕ್ರಮವಾಗಿ ಮೂರು ಮತ್ತು ಮೂರೂವರೆ ರು.ಗಳಷ್ಟು ಹೆಚ್ಚಿಸಿದೆ. ಪೆಟ್ರೋಲ್ ಮೇಲಿನ ಮೌಲ್ಯವರ್ದಿತ ತೆರಿಗೆಯನ್ನು ಶೇ.೨೫.೯೨ ರಿಂದ ೨೯.೮೪ಕ್ಕೆ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಶೇ. ೧೪.೩ರಿಂದ ೧೮.೪ಕ್ಕೆ ಹೆಚ್ಚಳ ಮಾಡಿರುವ ಕಾರಣ ಗ್ರಾಹಕರ ಜೇಬಿಗೆ ಹೆಚ್ಚುವರಿ ದರದ ಭಾರ ಬಿದ್ದಿದೆ.

ರಾಜ್ಯದಲ್ಲಿ ಸುಮಾರು ಎರಡೂವರೆ ವರ್ಷಗಳ ಬಳಿಕ ಇಂಧನ ದರ ಏರಿಕೆಯಾಗಿದೆ. ಈ ಹಿಂದೆ ೨೦೨೧ರ ನವೆಂಬರ್‌ನಲ್ಲಿ ಪೆಟ್ರೋಲ್ ದರ ೧೦೦ ರು.ಗಳ ಗಡಿ ದಾಟಿದಾಗ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ರಾಜ್ಯದಲ್ಲಿ ಆಡಳಿತ ಪಕ್ಷದ ಸ್ಥಾನದಲ್ಲಿ ಕುಳಿತಿರುವ ಕಾಂಗ್ರೆಸ್ ಅಂದು ಬೀದಿಗಿಳಿದು ಪ್ರತಿಭಟನೆ ನಡೆಸಿತ್ತು. ಜನರ ಆಕ್ರೋಶಕ್ಕೆ ಮಣಿದು ಕೇಂದ್ರ ಸರಕಾರ ಮತ್ತು ಬಸವರಾಜ ಬೊಮ್ಮಾಯಿ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ದರವನ್ನು ಕ್ರಮವಾಗಿ ೧೨ ರು. ಮತ್ತು ೧೭ ರೂ. ತನಕ ಇಳಿಸಿತ್ತು. ಇದರಿಂದ ಬೆಂಗಳೂರಿನಲ್ಲಿ ೧೧೪ ರು. ಗಳಿದ್ದ ಪೆಟ್ರೋಲ್ ದರ ೧೦೦ರ ಗಡಿಗೆ ಬಂದಿತ್ತು.

೧೦೪.೫೦ ರು.ಗಳಿದ್ದ ಡೀಸೆಲ್ ಬೆಲೆ ೮೫ ರು.ಗಳಿಗೆ ಇಳಿದಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಇದೀಗ ಬ್ಯಾರಲ್‌ಗೆ ೮೦ ಡಾಲರ್‌ ನಷ್ಟಿದೆ. ಈ ದೃಷ್ಟಿಯಿಂದ ನೋಡಿದರೆ ಇಂಧನ ಬೆಲೆ ಗಣನೀಯವಾಗಿ ಇಳಿಯಬೇಕಿತ್ತು. ಆದರೆ ಕೇಂದ್ರ ಮತ್ತು ರಾಜ್ಯಸರಕಾರಗಳು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಗಣನೀಯವಾಗಿ ತೆರಿಗೆ ವಿಽಸುವ ಮೂಲಕ ಇದನ್ನು ಬೊಕ್ಕಸ ತುಂಬುವ ಮಾರ್ಗವಾಗಿ ಕಂಡುಕೊಂಡಿವೆ. ಇಂಧನ ಬೆಲೆಯನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕೆಂಬ ಕೂಗು ಹಿಂದಿನಿಂದಲೂ ಇದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ನೂತನ ಸಚಿವ ಹರ್ದಿಪ್ ಸಿಂಗ್ ಪುರಿ ಅವರೂ ರಾಜ್ಯಗಳ ಒಪ್ಪಿಗೆ ಪಡೆದು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಗ್ಯಾರಂಟಿ ಯೋಜನೆಗಳ ಜಾರಿಗೆ ವಾರ್ಷಿಕ ಸುಮಾರು ೫೨ ಸಾವಿರ ಕೋಟಿ ರು.ಗಳಷ್ಟು ಹಣ ವ್ಯಯಿಸಬೇಕಾದ ರಾಜ್ಯಸರಕಾರ ಈಗ ತೆರಿಗೆ ಏರಿಕೆಯತ್ತಲೇ ಕಣ್ಣು ನೆಟ್ಟಿರುವುದರಿಂದ ಇದಕ್ಕೆ ಒಪ್ಪಿಗೆ ಸೂಚಿಸುವುದು ಸಂಶಯ. ಈಗಾಗಲೇ ವಿದ್ಯುತ್, ಆಸ್ತಿ ಮಾರ್ಗ ಸೂಚಿ ದರ, ನೋಂದಣಿ ಮತ್ತು ಮುದ್ರಾಂಕ ಶುಲ್ಕ, ಅಬಕಾರಿ ಸೆಸ್, ವಾಣಿಜ್ಯ ತೆರಿಗೆಯನ್ನು ಏರಿಸಿರುವುದು ಜನಸಾಮಾನ್ಯರಿಗೆ ಹೊರೆಯಾಗಿದೆ. ಮಳೆ ವ್ಯತ್ಯಯದ ಕಾರಣ ತರಕಾರಿ ಮತ್ತು ಬೇಳೆ ಕಾಳುಗಳ ದರವೂ ವಿಪರೀತ ಮಟ್ಟಕ್ಕೆ ಏರಿದೆ. ಇಂತಹ ಪರಿಸ್ಥಿತಿಯಲ್ಲಿ ಇಂಧನ ಬೆಲೆ ಏರಿಕೆಗೆ ಮುಂದಾಗಿರುವುದು ದುರದೃಷ್ಟಕರ.