Thursday, 12th December 2024

ಬೇಕಾಬಿಟ್ಟಿ ದರ: ಬೇಕಿದೆ ಕಡಿವಾಣ

ಎರಡನೇ ಶನಿವಾರ ಮತ್ತು ದೀಪಾವಳಿ ಹಬ್ಬದ ಕಾರಣದಿಂದ ಸಾಲು ಸಾಲು ರಜೆಗಳಿವೆ. ಹಬ್ಬ ಹರಿದಿನಗಳ ಸಮಯದಲ್ಲಿ ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಸಹಜವಾಗಿಯೇ ಹೆಚ್ಚುತ್ತದೆ. ಈ ಪರಿಸ್ಥಿತಿಯ ಲಾಭ ಪಡೆಯಲು ಖಾಸಗಿ ಬಸ್ ಮಾಲೀಕರು ಪ್ರಯಾಣ ದರವನ್ನು ಎರಡ್ಮೂರು ಪಟ್ಟು ಹೆಚ್ಚಿಸಿದ್ದಾರೆ.

ವಿಮಾನ ಟಿಕೆಟ್‌ಗಳಿಗಿಂತಲೂ ಹೆಚ್ಚಿನ ಬೆಲೆ ಏರಿಸಿ ಜನರನ್ನು ಸುಲಿಗೆ ಮಾಡುತ್ತಿದ್ದಾರೆ. ಬೆಂಗಳೂರಿನಿಂದ ಹುಬ್ಬಳ್ಳಿ, ಗೋವಾ, ಕಾರವಾರ, ಬೆಳಗಾವಿ ಸೇರಿದಂತೆ ಹಲವು ಪ್ರಯಾಣದ ದರಗಳು ಗಗನಕ್ಕೇರಿವೆ. ಬೆಂಗಳೂರು-ಹುಬ್ಬಳ್ಳಿಗೆ ಹೋಗುವ ಬಸ್‌ಗಳ ದರ ಸಾಮಾನ್ಯವಾಗಿ ೫೦೦ ರಿಂದ ೮೦೦ ರುಪಾಯಿ ಇರುತ್ತವೆ. ಆದರೆ ಈಗ ೫೦೦೦ ರು. ವರೆಗೂ ಏರಿಸಲಾಗಿದೆ. ದಸರಾ ಹಬ್ಬದ ಸಂದರ್ಭದಲ್ಲೂ ಖಾಸಗಿ ಬಸ್‌ಗಳ ವಸೂಲಿ ವ್ಯಾಪಕವಾಗಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಮಿತಿಮೀರಿ ಟಿಕೆಟ್ ದರವನ್ನು ವಸೂಲಿ ಮಾಡದಂತೆ ಖಾಸಗಿ ಬಸ್ ಮಾಲೀಕರಿಗೆ ಸಾರಿಗೆ ಇಲಾಖೆಯು ಹಲವು ವರ್ಷಗಳಿಂದಲೂ ಸೂಚನೆ ನೀಡುತ್ತಲೇ ಬಂದಿದೆ. ಬೇಕಾಬಿಟ್ಟಿಯಾಗಿ ಪ್ರಯಾಣ ದರ ಏರಿಕೆ ಮಾಡುವವರ ವಿರುದ್ಧ ಪರ್ಮಿಟ್ ರದ್ದು ಮಾಡುವಂತಹ ಕ್ರಮಗಳನ್ನು ಕೈಗೊಳ್ಳುವುದಾಗಿ ಎಚ್ಚರಿಸುತ್ತಿರುತ್ತದೆ.

ಇದನ್ನು ಖಾಸಗಿ ಬಸ್ ಮಾಲೀಕರು ಲೆಕ್ಕಕ್ಕೇ ತೆಗೆದುಕೊಳ್ಳುತ್ತಿಲ್ಲ. ಹಬ್ಬದ ಹಿನ್ನೆಲೆಯಲ್ಲಿ ಬಸ್‌ಗಳ ಟಿಕೆಟ್ ಬುಕಿಂಗ್ ಪ್ರಕ್ರಿಯೆ ತಿಂಗಳು ಮುಂಚಿತ ವಾಗಿಯೇ ಆರಂಭವಾಗಿರುತ್ತವೆ. ಬಹುತೇಕ ಎಲ್ಲವೂ ಆನ್‌ಲೈನ್ ಮೂಲಕವೇ ನಡೆಯುತ್ತವೆ. ಯಾರು ಎಷ್ಟು ವಸೂಲಿ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತದೆ. ಹೀಗಿರುವಾಗ ಕ್ರಮ ಕೈಗೊಳ್ಳಲು ಹಿಂದೇಟು ಹಾಕುವುದು ಯಾಕೆ? ಬರೀ ಪರವಾನಗಿ ನಿಯಮ ಉಲ್ಲಂಘನೆಗೆ ೫ ಸಾವಿರ ರುಪಾಯಿ ದಂಡ ವಿಧಿಸಿದರೆ ಮುಗಿಯಿತೇ? ಪರವಾನಗಿ ಅಮಾನತುಗೊಳಿಸುವಂತಹ ಕಠಿಣ ಕ್ರಮ ಕೈಗೊಳ್ಳಬೇಕಿದೆ.

ಆಗ ಮಾತ್ರ ಪ್ರಯಾಣಿಕರನ್ನು ವಸೂಲಿ ಮಾಡುವ ದಂಧೆ ನಿಲ್ಲಬಹುದು. ಇಲ್ಲವಾದಲ್ಲಿ ಇದು ಪ್ರತಿ ಹಬ್ಬಹರಿದಿನಗಳಲ್ಲೂ ಮುಂದುವರಿಯುತ್ತಲೇ ಇರು
ತ್ತದೆ. ಈ ಬಾರಿ ಸಾರಿಗೆ ಇಲಾಖೆ ಯಾವ ರೀತಿ ಕ್ರಮ ಜರುಗಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.