Sunday, 15th December 2024

ಸಣ್ಣ ಪ್ರಯತ್ನವಾದರೂ ಅನುಕರಣೀಯ ಮಾದರಿ

ಸರಕಾರಿ ಕಚೇರಿಗಳು, ಕಂಪನಿಗಳು, ನಿಗಮಗಳು, ಪ್ರಾಧಿಕಾರಗಳು ಎಂದರೆ ಘನತೆಯ ಜತೆಯಲ್ಲಿಯೇ ಲಾಭದಾಯಕವಲ್ಲದ್ದು ಎಂಬ ಭಾವನೆಯೂ ಬೆಳೆಯುತ್ತಿದೆ. ಈ ಕಾರಣದಿಂದಾಗಿ ಅನೇಕ ಸರಕಾರಿ ಸ್ವಾಮ್ಯದ ಕಾರ್ಖಾನೆಗಳು ಖಾಸಗೀಕರಣಕ್ಕೆ ಒಳಗಾಗು ತ್ತಿದ್ದರೆ, ಮತ್ತೆ ಕೆಲವು ಮುಚ್ಚುವ ಹಂತ ತಲುಪುತ್ತಿವೆ.

ಒಟ್ಟಾರೆ ರಾಜ್ಯ ಹಾಗೂ ದೇಶದಲ್ಲಿ ಸರಕಾರಿ ಕಂಪನಿಗಳು ಹಾಗೂ ಕಚೇರಿಗಳೆಂದರೆ ಹೊಸ ಪ್ರಯತ್ನಗಳಿಲ್ಲದೆ ಸಂಬಳಕ್ಕಾಗಿ ದುಡಿಯುವ ಒಂದು ಮಾದರಿ ಎಂಬ ಆರೋಪಗಳು ಕೇಳಿಬರುತ್ತವೆ. ಇಂಥ ಸಂದರ್ಭದಲ್ಲಿ ಸರಕಾರಿ ಸ್ವಾಮ್ಯದ ಕಂಪನಿಗಳಾಗಲಿ,
ನಿಗಮಗಳಾಗಲಿ ಜಾರಿಗೆ ತರುವಂಥ ಒದೊಂದು ಹೊಸ ಪ್ರಯತ್ನಗಳು ಸರಕಾರಗಳ ಪಾಲಿಗೆ ಮಹತ್ವದ ಸಾಧನೆಯೇ ಸರಿ. ಇದೀಗ ಇಂಥದೊಂದು ಮಾತಿಗೆ ಉದಾಹರಣೆಯಾಗಿ ಗೋಚರಿಸುತ್ತಿದೆ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮ.

ರಾಜ್ಯದಲ್ಲಿ ರೈತರು ಬೆಳೆದ ಮಾವಿಗೆ ಉತ್ತಮ ಮಾರುಕಟ್ಟೆ ಒದಗಿಸುವಲ್ಲಿ ಈ ನಿಗಮ ಯಶಸ್ವಿಗೊಂಡಿದ್ದು, ಕರೋನಾದ
ಈ ಸಂಕಷ್ಟ ಸಂದರ್ಭದಲ್ಲೂ 55 ಟನ್ ಮಾವು ಮಾರಾಟ ಮಾಡಿ ಗಮನಸೆಳೆದಿದೆ. ನಿಗಮವು ಕರ್ ಸಿರಿ ಎಂಬ ಪೋರ್ಟಲ್ ಆರಂಭಿಸಿ ಆನ್ ಲೈನ್ ಮೂಲಕ ಆರ್ಡರ್‌ಗಳನ್ನು ಪಡೆದು, ಹಣ್ಣನ್ನು ಅಂಚೆ ವ್ಯವಸ್ಥೆ ಮೂಲಕ ಗ್ರಾಹಕರಿಗೆ ತಲುಪಿಸುವಲ್ಲಿ ಯಶಸ್ವಿಗೊಂಡಿದೆ. ಮಾವು ಹಂಗಾಮು ಮುಗಿಯುವುದರೊಳಗೆ 100ಟನ್ ಮಾವು ಮಾರಾಟ ಗುರಿ ಹೊಂದಲಾಗಿದ್ದು, 18 ತಳಿಗಳ ಮಾವನ್ನು ಮಾರಾಟ ಮಾಡಲಾಗುತ್ತಿದೆ.

ನಿಗಮವು ಸರಕಾರಿ ಅಂಚೆ ವ್ಯವಸ್ಥೆಯನ್ನು ಹಾಗೂ ಸಾಮಾಜಿಕ ಜಾಲತಾಣವನ್ನು ಸದುಪಯೋಗಪಡಿಸಿಕೊಂಡು ರೈತರು ಹಾಗೂ ಗ್ರಾಹಕರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಿರುವುದು ಒಳ್ಳೆಯ ಬೆಳವಣಿಗೆ. ಇತರ ಸರಕಾರಿ ನಿಗಮಗಳು ಹಾಗೂ ಸರಕರಿ ಸ್ವಾಮ್ಯದ ಕಾರ್ಖಾನೆಗಳಿಗೆ ಈ ನಡೆ ಅನುಕರಣೀಯ ಮಾದರಿ.