545 ಪಿಎಸ್‌ಐ ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದ ಆರೋಪ ಕೇಳಿಬಂದ ಕಾರಣ, ನೇಮಕ ರದ್ದು ಮಾಡಿ, ಸದ್ಯದಲ್ಲಿಯೇ ಮರುಪರೀಕ್ಷೆ ನಡೆಸುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪ್ರಕಟಿಸಿದ್ದರು. ಎರಡು ತಿಂಗಳು ಕಳೆಯುತ್ತ ಬಂದರೂ ಇನ್ನೂ ಮರುಪರೀಕ್ಷೆಯ ದಿನಾಂಕವನ್ನು ಪ್ರಕಟಿ ಸಿಲ್ಲ. ಈಗಾಗಲೇ ಆಯ್ಕೆ ಪಟ್ಟಿಯಲ್ಲಿರುವವರು, ಸ್ವಲ್ಪ ಅಂಕಗಳಲ್ಲೇ ಆಯ್ಕೆ ಪಟ್ಟಿಗೆ ಸೇರ್ಪಡೆಯಾಗದ ಸಾವಿರಾರು ಅಭ್ಯರ್ಥಿಗಳು ಮತ್ತೆ ಓದಿನತ್ತ ಗಮನಹರಿಸಿ ದ್ದಾರೆ. ಅನೇಕ ಇನ್ಸ್ಟಿಟ್ಯೂಟ್ ಗಳು ಕೋಚಿಂಗ್ ಆರಂಭಿಸಿವೆ.
ಇವರೆಲ್ಲರಿಗೂ ಪರೀಕ್ಷೆ ದಿನಾಂಕ ಯಾವಾಗ ಎಂಬುದೇ ತಿಳಿಯದಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಹಬ್ ಗಳೆಂದೇ ಪ್ರಸಿದ್ಧಿಯಾಗಿರುವ ಬೆಂಗಳೂರು, ಧಾರವಾಡ, ಮೈಸೂರು, ವಿಜಯಪುರದಂತಹ ನಗರಗಳಲ್ಲಿ ವಾಸ್ತವ್ಯ ಹೂಡಿ, ಕೋಚಿಂಗ್ ಪಡೆದು ಪರೀಕ್ಷೆಗೆ ಸಿದ್ಧವಾಗಬೇಕೆಂದರೆ ತಿಂಗಳಿಗೆ ಕನಿಷ್ಠವೆಂದರೂ ಒಬ್ಬ ಅಭ್ಯರ್ಥಿಗೆ ಹತ್ತರಿಂದ ಹದಿನೈದು ಸಾವಿರ ರುಪಾಯಿ ಅಗತ್ಯವಿರುತ್ತದೆ. ಅನೇಕ ಬಡ, ಕೂಲಿ ಕಾರ್ಮಿಕರ ಕುಟುಂಬದ ಮಕ್ಕಳು ಈ ನಗರಗಳಿಗೆ ಬಂದು ಮತ್ತೆ ಓದುತ್ತಿದ್ದಾರೆ. ಅವರೆಲ್ಲರಿಗೂ ತಿಂಗಳಿನ ಖರ್ಚು ವೆಚ್ಚ ವನ್ನು ಹೊಂದಿಸುವುದು ಅಷ್ಟು ಸುಲಭದ ಮಾತಲ್ಲ.
ಆದ್ದರಿಂದ ಸರಕಾರ ಆದಷ್ಟು ಬೇಗ ಪಿಎಸ್‌ಐ ನೇಮಕಕ್ಕೆ ಮರು ಪರೀಕ್ಷೆ ದಿನಾಂಕ ಪ್ರಕಟಿಸಬೇಕಿದೆ. ಅಲ್ಲದೆ, ಕಳೆದ ಬಾರಿ ಅಕ್ರಮ ಹೇಗೆ ನಡೆಯಿತು ಎಂಬುದು ತನಿಖೆಯಿಂದ ಗೊತ್ತಾಗಿದೆ. ಈ ಬಾರಿ ಎಚ್ಚೆತ್ತು ಕಟ್ಟುನಿಟ್ಟಿನ ಪರೀಕ್ಷೆ ನಡೆಸಲು ವಿಶೇಷ ಆಸಕ್ತಿ ವಹಿಸಬೇಕು. ಕಳೆದ ಬಾರಿ ಅಕ್ರಮದಲ್ಲಿ ಭಾಗಿಯಾದ ಮತ್ತು ಶಂಕಾಸ್ಪದ ವ್ಯಕ್ತಿಗಳಿಗೆ ಈ ಬಾರಿ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ಕೊಡಬಾರದು. ಯಾರೋ ಕೆಲವರು ಮಾಡಿದ ತಪ್ಪಿಗೆ, ಪಿಎಸ್‌ಐ ನೇಮಕದ ಇಡೀ ಪ್ರಕ್ರಿಯೆಯನ್ನೇ ತಡೆ ಹಿಡಿದಿರುವುದು ಎಷ್ಟು ತಪ್ಪೋ, ಇದೀಗ ಮರುಪರೀಕ್ಷೆಯನ್ನು ಘೋಷಣೆ ಮಾಡದೇ ಇರುವುದು ಆಕಾಂಕ್ಷಿಗಳಿಗೆ ಮಾಡುತ್ತಿರುವ ಅನ್ಯಾಯ.
ಮತ್ತೊಂದು ಸಮಸ್ಯೆ ಎಂದರೆ ಸರಕಾರಿ ಹುದ್ದೆ ಗಿಟ್ಟಿಸಿಕೊಳ್ಳಲು, ವಯೋಮಿತಿಯ ನಿಯಮವೂ ಇರುವುದರಿಂದ ಒಂದು ವೇಳೆ ಪರೀಕ್ಷೆ ತಡವಾದಷ್ಟು, ಅರ್ಹ ಅಭ್ಯರ್ಥಿಗಳು ವಯೋಮಿತಿಯ ಕಾರಣಕ್ಕೆ ಸರಕಾರ ಕೆಲಸದಿಂದ ವಂಚಿತರಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸರಕಾರ ಇದೀಗ, ಪಿಎಸ್‌ಐ ಮರುಪರೀಕ್ಷೆ ಯನ್ನು ಆದ್ಯತಾ ವಿಷಯವನ್ನು ತಗೆದುಕೊಳ್ಳಬೇಕಿದೆ.