ರಾಜ್ಯದಲ್ಲಿ ಗದ್ದಲ ಎಬ್ಬಿಸಿದ ಪಿಎಸ್ಐ ನೇಮಕ ಅಕ್ರಮ, ಬಿಟ್ ಕಾಯಿನ್ ಹಗರಣ ಸೇರಿದಂತೆ ಬಿಜೆಪಿ ಆಡಳಿತದ ಕಾಲದ ಹಲವು ಅಕ್ರಮಗಳ ತನಿಖೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮುಂದಾಗಿದೆ. ಸಾರ್ವಜನಿಕ ಹಣವನ್ನು ದುರ್ಬಳಕೆ ಮಾಡಿದ, ಅವ್ಯವಹಾರವೆಂದು ಕಂಡು ಬಂದ ಯಾವುದೇ ಸಂಗತಿಯನ್ನಾದರೂ ತನಿಖೆಗೊಳಪಡಿಸಿ, ತಪ್ಪಿತಸ್ಥರಾಗಿದ್ದಲ್ಲಿ ಶಿಕ್ಷಿಸುವ ಕಾರ್ಯ ಹಾಗೂ ಹೊಣೆಗಾರಿಕೆ ಎರಡೂ ಆಡಳಿತದ ಭಾಗವೇ.
ಆದರೆ, ಪ್ರತಿಬಾರಿ ಹೊಸ ಸರಕಾರಗಳು ಅಧಿಕಾರಕ್ಕೆ ಬಂದಾಗಲೂ ಹಿಂದಿನ ಸರಕಾರಗಳ ಭ್ರಷ್ಟಾಚಾರದ ತನಿಖೆಯ ನೆಪದಲ್ಲಿ ಪ್ರತಿಪಕ್ಷಗಳನ್ನು ಕಟ್ಟಿಹಾಕುವ ತಂತ್ರವನ್ನು ಪ್ರಯೋಗಿಸುವುದು ಸಂಪ್ರದಾಯವೆಂಬಂತಾಗಿದೆ. ೨೦೧೩ರಲ್ಲೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವೇ ಹಲವು ಸದನ ಸಮಿತಿಗಳು, ನ್ಯಾಯಾಂಗ ತನಿಖೆಗಳಿಗೆ ಆದೇಶಿಸಿತ್ತು. ಇದೀಗ ಪುನಃ ಅವರದೇ ಸರಕಾರ ‘ತನಿಖೆ’ ಎಂಬ ರಾಜಕೀಯ ಅಸ್ತ್ರ ಪ್ರಯೋಗಿಸುತ್ತಿದೆ. ವಿಚಿತ್ರವೆಂದರೆ ಬಹುತೇಕ ಇಂಥ ತನಿಖೆಗಳು ಕೊನೆ ಮುಟ್ಟುವುದೇ ಇಲ್ಲ, ಅಥವಾ ತನಿಖೆ ನಡೆಸಿ ಸಲ್ಲಿಸಿದ ವರದಿಗಳು ಕಡತದಿಂದ ಆಚೆಗೆ ಬರುವುದೇ ಇಲ್ಲ.
ಇನ್ನು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದು ದೂರದ ಮಾತಾಯಿತು. ಅನಗತ್ಯ ವಾಗಿ ರಾಜಕೀಯ ಕಾರಣಕ್ಕೆ ಎಲ್ಲ ಪಕ್ಷಗಳಿಂದಲೂ ತನಿಖೆಯ ನೆಪದಲ್ಲಿ ಕೋಟ್ಯಂತರ ರು. ಹಣ, ನೂರಾರು ಮಾನವ ದಿನ ಹಾಗೂ ಶ್ರಮ ವ್ಯರ್ಥವಾಗುತ್ತಿದೆ. ಸದನ ಸಮಿತಿಗಳು, ನ್ಯಾಯಾಂಗ ತನಿಖೆಗಳಂತೂ ರಾಜ್ಯದ ಇತಿಹಾಸದುದ್ದಕ್ಕೂ ರಾಜಕೀಯ ದಾಳವಾಗಿದ್ದೇ ಹೆಚ್ಚು. ಇನ್ನೂ ವಿಶೇಷವೆಂದರೆ ಅಕ್ರಮ, ಭ್ರಷ್ಟಾಚಾರದ ಪ್ರಕರಣಗಳ ಸುಳಿ ಯಲ್ಲಿ ಸಿಲುಕುವ ಅಧಿಕಾರಿಗಳಿಗೆ ‘ಪ್ರಭಾವಿ ರಾಜಕಾರಣಿಗಳ ಆಶ್ರಯ’ವೇ ದೊರೆಯುತ್ತದೆ.
ಇನ್ನು ರಾಜಕಾರಣಿಗಳಾಗಿದ್ದರಂತೂ ತನಿಖೆಯ ಕುಣಿಕೆಯಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ ಎಂಬ ಸ್ಥಿತಿ ಬರುತ್ತಿದ್ದಂತೆಯೇ ಪಕ್ಷವನ್ನೇ ಬದಲಿಸಿ, ಅಥವಾ ಬೆಂಬಲಿಸಿ ಸರಕಾರದ ಭಾಗವಾಗುವ ಮೂಲಕ ಆಡಳಿತಾರೂಢರ ಕೃಪಾಪೋಷಣೆಗೆ ಒಳಗಾಗಿ ಬಿಡುತ್ತಾರೆ. ಇಲ್ಲವೇ ಯಾವುದೇ ಸ್ವರೂಪದ ಅಧಿಕಾರದ ಗುರಾಣಿಯನ್ನು ಮುಂದಿಟ್ಟು ಕೊಂಡುಬಿಡುತ್ತಾರೆ. ಇಷ್ಟಾಗು ತ್ತಿದ್ದಂತೆಯೇ ಇದ್ದಕ್ಕಿದ್ದಂತೆ ಅದು ಹೇಗೋ ತನಿಖೆಯ ಸದ್ದಡಗಿ ಬಿಡುತ್ತದೆ. ಬಹುತೇಕ ಸಂದರ್ಭ ತನಿಖೆಯ ಭಾಗವಾಗಿದ್ದವರೂ ಮೌನಕ್ಕೆ ಶರಣಾಗಿಬಿಡುತ್ತಾರೆ.
ಸರಕಾರಗಳು ಸಹ ಯಾವುದೇ ವಿಷಯದಲ್ಲಿ ‘ಅನಿವಾರ್ಯ’ಕ್ಕೆ ಸಿಲುಕಿದಾಗ, ಸಾರ್ವಜನಿಕವಾಗಿ ತೀವ್ರ ಚರ್ಚೆ ಎದ್ದಾಗಲೆಲ್ಲ ‘ತನಿಖಾ ಸಮಿತಿ’ ರಚಿಸಿ ಕೈತೊಳೆದುಕೊಳ್ಳುತ್ತವೆ. ತನಿಖೆಗೆ ಆಗ್ರಹಿಸಿದವರು ಸಹ ಅಧಿಕಾರಕ್ಕೇರುತ್ತಿದ್ದಂತೆ ಮಾಡುವುದೂ ಇದನ್ನೇ. ಯಾವ ಪಕ್ಷದ ಸರಕಾರವೂ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಬದ್ಧತೆ ಪ್ರದರ್ಶಿಸುತ್ತಿಲ್ಲ. ಇಂಥ ತನಿಖೆ ಗಳು ಯಾವ ಪುರುಷಾರ್ಥಕ್ಕೆ?
Read E-Paper click here