ದೇಶದ ಬಹಳಷ್ಟು ಜನರಿಗೆ ಪ್ರಸ್ತುತ ಲಸಿಕೆ ನೀಡುತ್ತಿರುವ ಕ್ರಮದಿಂದ ಹಿಡಿದು ಪಡಿತರ ವ್ಯವಸ್ಥೆಯವರೆಗೆ ಆಧಾರ್ನ ಪಾತ್ರ
ಮುಖ್ಯವಾಗಿದೆ.
ಆದರೆ ಆಧಾರ್ ಅಧಿಕೃತತೆ ಬಗ್ಗೆ ಅಗಾಗ್ಗೆ ಅಪಸ್ವರಗಳು ಉಂಟಾಗುತ್ತಿರುವುದರಿಂದ ಜನರಲ್ಲಿ ಆಧಾರ್ ಬಗ್ಗೆ ಇಂದಿಗೂ
ಗೊಂದಲವಿದೆ. ಆದರೆ ಇದೀಗ ಆಧಾರ್ ಮಾದರಿಯಲ್ಲಿಯೇ ಕೇಂದ್ರ ಸರಕಾರದಿಂದ ‘ಸಾರ್ವತ್ರಿಕ ಕುಟುಂಬ ದಾಖಲಾತಿ ಕಾರ್ಡ್’
ಅಭಿವೃದ್ಧಿಪಡಿಸುವುದಕ್ಕೆ ಮುಂದಾಗಿದೆ ಎಂಬ ವಿಷಯ ಮಹತ್ವಪಡೆಯುತ್ತಿದೆ. ಆಧಾರ್ ರೀತಿಯಲ್ಲಿಯೇ ಕುಟುಂಬಗಳ
ಪ್ರತಿಯೊಬ್ಬ ನಾಗರಿಕರಿಗೂ ವಿಶಿಷ್ಟ ಗುರುತಿನ ಸಂಖ್ಯೆಯೊಂದಿಗೆ ಈ ಕಾರ್ಡ್ ನೀಡಲಾಗುವುದು ಎನ್ನಲಾಗುತ್ತದೆ. ಈ ಬಗ್ಗೆ ಈಗಷ್ಟೇ ಪ್ರಯತ್ನಗಳು ಆರಂಭಗೊಂಡಿದ್ದರೂ, ಇದೊಂದು ಮಹತ್ವದ ಕಾರ್ಯ.
ಆದರೆ ಇದು ಮತ್ತೊಂದು ಆಧಾರ್ ರೀತಿ ಆಗದೆ ಸಮರ್ಪಕವಾಗಿ ಜಾರಿಗೊಳ್ಳಬೇಕಿದೆ. ಈ ಪ್ರಯತ್ನವು ಸದೃಢ ಭಾರತದ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. ದೇಶದಲ್ಲಿ ಕೆಲವು ಸೌಲಭ್ಯಗಳನ್ನು ಪಡೆಯಲು ಅಥವಾ ಭಾರತೀಯ ಪೌರತ್ವದ ದಾಖಲೆ ಗಾಗಿ ಮಹತ್ವದ ದಾಖಲಾತಿಗಳ ಅವಶ್ಯಕತೆ ಇರುವುದರಿಂದ ಇದೀಗ ಪಡಿತರಚೀಟಿ, ಮತದಾನ ಗುರುತಿನಚೀಟಿ ಹಾಗೂ ಆಧಾರ್ ಕಾರ್ಡ್ಗಳನ್ನು ಬಳಸಲಾಗುತ್ತಿದೆ.
ಇವುಗಳ ಬದಲಾಗಿ ಪೌರತ್ವದ ದಾಖಲಾತಿ ಹಾಗೂ ಸೌಲಭ್ಯಗಳ ಪಡೆಯಲು ಸಾರ್ವತ್ರಿಕ ಕುಟುಂಬ ದಾಖಲಾತಿ ಕಾರ್ಡ್ ಜಾರಿಗೆ ತರುವ ಪ್ರಯತ್ನ ಉತ್ತಮವಾಗಿದೆ. ಇದರಿಂದ ಪಡಿತರ ಚೀಟಿಯನ್ನು ಕೇವಲ ಪಡಿತರ ವಿತರಣೆ ವ್ಯವಸ್ಥೆಯ ದಾಖಲಾತಿಗೆ ಮಾತ್ರ ಸೀಮಿತಗೊಳಿಸಬಹುದಾಗಿದೆ. ಪೌರತ್ವ ಹಾಗೂ ಮತದಾನ ಗರುತಿನ ಚೀಟಿಯಾಗಿ ಸಾರ್ವತ್ರಿಕ ಕುಟುಂಬ ಐಡಿ ಬಳಸಲು ಅವಕಾಶ ನೀಡಿದರೆ, ದೇಶದ ಪ್ರತಿಯೊಂದು ಕಾರ್ಯಕ್ಕೂ ಒಂದೇ ಗುರುತಿನ ಚೀಟಿ ಜಾರಿಗೆ ತರಲು ಇದೊಂದು ಉತ್ತಮ
ಪ್ರಯತ್ನವಾಗಬಲ್ಲದು.