ಕರೋನಾ ಎರಡನೇ ಅಲೆಯ ನಡುವೆಯೂ ರಾಜ್ಯ ಸರಕಾರ ಹಾಗೂ ಶಿಕ್ಷಣ ಇಲಾಖೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಮೊದಲೇ ಹೇಳಿದಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳನ್ನು ಇಲಾಖೆ ಪಾಸು ಮಾಡುವ ಮೂಲಕ ಮೊದಲ ಹಂತವನ್ನು ಯಶಸ್ವಿಯಾಗಿ ಮುಗಿಸಿದೆ.
ಕರೋನಾ ಎರಡನೇ ಅಲೆ ತೀವ್ರವಾಗಿರುವ ಸಮಯದಲ್ಲಿ ಪರೀಕ್ಷೆ ನಡೆಸಿ ಫಲಿತಾಂಶ ನೀಡಿರುವುದು ಉತ್ತಮ ಸಂಗತಿ. ಇದರೊಂದಿಗೆ ವಿದ್ಯಾರ್ಥಿಗಳಿಗೂ ಸುಮ್ಮನೆ ಪಾಸಾದೆವು ಎನ್ನುವ ಬದಲು ಪರೀಕ್ಷೆ ಬರೆದು ಪಾಸಾದೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಈ ಎಲ್ಲ ಸಂಗತಿ ಒಂದು ಕಡೆಯಾದರೆ, ಇದೀಗ ಪಾಸಾಗಿರುವ ವಿದ್ಯಾರ್ಥಿಗಳಿಗೆ ಪಿಯುಸಿಗೆ ಪ್ರವೇಶ ಯಾವ ರೀತಿ ನೀಡುತ್ತಾರೆ ಎನ್ನುವುದು ಇನ್ನೊಂದು ಭಾಗ. ಈ ಹಂತದಲ್ಲಿ ರಾಜ್ಯ ಸರಕಾರ, ಶಿಕ್ಷಣ ಇಲಾಖೆಯ ಮೇಲೆ ಇನ್ನೊಂದು ಮಹತ್ವದ ಜವಾಬ್ದಾರಿಯಿದೆ.
ಏನೆಂದರೆ ಸಾಮಾನ್ಯವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರತಿಬಾರಿಯೂ ಶೇ.65ರಿಂದ 70ರಷ್ಟು ಫಲಿತಾಂಶ ಬರುತ್ತಿತ್ತು. ಅಂದರೆ ಪ್ರತಿವರ್ಷ ಮೂರು ಲಕ್ಷ ವಿದ್ಯಾರ್ಥಿಗಳು ಫೇಲ್ ಆಗುತ್ತಿದ್ದರು. ಅದಕ್ಕೆ ಸರಿಹೊಂದುವಂತೆ ಪಿಯು ಕಾಲೇಜುಗಳು ಸೀಟ್‌ಗಳನ್ನು ನೀಡಲಾಗಿತ್ತು. ಆದರೆ ಇದೀಗ ಹೆಚ್ಚುವರಿಯಾಗಿ ಮೂರು ಲಕ್ಷ ಸೀಟುಗಳನ್ನು ಯಾವ ವ್ಯವಸ್ಥೆ ಶುರು ಮಾಡುತ್ತಾರೆ ಎನ್ನುವುದು ಸರಕಾರದ ಮುಂದಿರುವ ಬಹುದೊಡ್ಡ ಸವಾಲಾಗಿದೆ. ಇನ್ನು ಈ ವಿದ್ಯಾರ್ಥಿಗಳಿಗೆಂದು ಮೂರು ಲಕ್ಷ ಹೊಸದಾಗಿ ಸೀಟುಗಳನ್ನು ಆರಂಭಿಸಿದರೂ, ಅದು ಮುಂದಿನ ವರ್ಷಕ್ಕೆ ಈ ಸೀಟುಗಳು ಇಷ್ಟೇ ಪ್ರಮಾಣದಲ್ಲಿ ಪ್ರವೇಶ ಪಡೆಯುತ್ತಾರೆ ಎನ್ನಲು ಸಾಧ್ಯವಿಲ್ಲ. ಆದ್ದರಿಂದ ಇದೀಗ ಎಂಟು ಲಕ್ಷ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಸೀಟುಗಳನ್ನು ಯಾವ ರೀತಿ ಹಂಚಿಕೆ ಯಾಗುತ್ತದೆ ಎನ್ನುವುದನ್ನು ನೋಡಬೇಕಿದೆ.