ಚಿಕ್ಕಬಳ್ಳಾಪುರದ ಹಿರೇನಾಗವೇರಿ ಎಂಬಲ್ಲಿ ಕಲ್ಲುಕ್ವಾರಿಯೊಂದರ ಬಳಿ ಸೋಟ ಸಂಭವಿಸಿದ್ದು, 6 ಜನ ಮೃತಪಟ್ಟಿದ್ದಾರೆ.
ಹಲವು ಅಪರಾಧ ಪ್ರಕರಣಗಳಲ್ಲಿ ಈ ಘಟನೆಯೂ ಒಂದು. ಆದರೆ ಈ ಒಂದು ಘಟನೆ ಬಹಳಷ್ಟು ಅವಲೋಕನಕ್ಕೆ ಕಾರಣ ವಾಗಿದೆ. ಇತ್ತೀಚೆಗಷ್ಟೇ ಶಿವಮೊಗ್ಗ ಜಿಲ್ಲೆಯ ಹುಣಸೋಡು ಎಂಬಲ್ಲಿ ಸೋಟ ಸಂಭವಿಸಿದ ನಂತರ ರಾಜ್ಯದಲ್ಲಿ ಅಕ್ರಮ ಕಲ್ಲು ಕ್ವಾರಿಗಳ ಪತ್ತೆ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೊಳಗಿತ್ತು.
ರಾಜ್ಯದಲ್ಲಿರುವ ಎಲ್ಲಾ ಕಲ್ಲು ಕ್ವಾರಿಗಳ ಸಮೀಕ್ಷೆ ನಡೆಸಿ ಒಂದು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚಿಸಿತ್ತು. ತಿಂಗಳು ಕಳೆಯುವುದರಲ್ಲಿ ಈಗಾಗಲೇ ಚಿಕ್ಕಬಳ್ಳಾಪುರದಲ್ಲಿ ದುರಂತ ಸಂಭವಿಸಿದೆ. ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೂಚಿಸಿರುವುದು ಒಂದೆಡೆ ಯಾದರೆ, ಮತ್ತೊಂದೆಡೆ ಪ್ರತಿಪಕ್ಷಗಳು ಸಹ ಸರಕಾರದ ನಡೆಯನ್ನು ವಿರೋಧಿಸುತ್ತಿವೆ. ಇಂಥ ವೇಳೆಯಲ್ಲಿ ಅಕ್ರಮ ಕಲ್ಲುಕ್ವಾರಿ ಗಳನ್ನು ತಡೆಯುವಲ್ಲಿ ಸರಕಾರದ ಜವಾಬ್ದಾರಿ ಹೆಚ್ಚಾಗಿದೆ.
ಅಕ್ರಮ ಕಲ್ಲು ಕ್ವಾರಿಗಳ ಬಗ್ಗೆ ಕ್ರಮ ಕೈಗೊಳ್ಳುವುದರ ಜತೆಗೆ ಅಕ್ರಮ ಸ್ಫೋಟಕ ಮಾರಾಟದ ತಡೆಗಾಗಿಯೂ ಕ್ರಮ ಜರುಗಿಸಲು ಸೂಕ್ತ ಕಾಲವಿದು. ರಾಜ್ಯದಲ್ಲಿ ಎರಡು ಸಾವಿರಕ್ಕೂ ಅಧಿಕ ಅನಧಿಕೃತ ಕ್ರಷರ್ ಹಾಗೂ ಕ್ವಾರಿಗಳಿವೆ ಎಂಬುದಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ರಾಜ್ಯದಲ್ಲಿ ಅಕ್ರಮ ಕಲ್ಲುಕ್ವಾರಿ ಹಾಗೂ ಅಕ್ರಮ ಸ್ಫೋಟಕಗಳ ಮಾರಾಟವನ್ನು ತಡೆಯಲು, ವಿಪಕ್ಷಗಳಿಗೆ ತಕ್ಕ ಉತ್ತರ ನೀಡಲು ರಾಜ್ಯ ಸರಕಾರಕ್ಕೆ ಇದು ಸೂಕ್ತಕಾಲ.