Friday, 8th November 2024

ಮಳೆಯ ಅಪಾಯಕ್ಕೆ ಸರಕಾರ ಸೂಕ್ತ ಸಿದ್ಧತೆ ಮಾಡಿಕೊಳ್ಳಲಿ

ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಪ್ರತಿ ದಿನವೂ ಮಳೆ ಸುರಿಯುತ್ತಿದ್ದು, ನಗರದ ಪ್ರಮುಖ ರಸ್ತೆಗಳೇ ಜಲಾವೃತವಾಗುತ್ತಿವೆ. ಪರಿಣಾಮವಾಗಿ ಅನೇಕ ಕಡೆ ವಾಹನ ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ.

ಬೆಂಗಳೂರಿನಲ್ಲಿ ಮಳೆಗಾಲದ ಸಮಯದಲ್ಲಿ ಪದೇಪದೆ ಪ್ರವಾಹ ಸಂಭವಿಸುವುದು, ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗುವುದು, ರಸ್ತೆಗಳಲ್ಲಿ ನೀರು ಕಟ್ಟಿಕೊಂಡು ಸಂಚಾರ ದಟ್ಟಣೆ ಉಂಟಾಗುವುದು ಸಾಮಾನ್ಯ ವೆಂಬಂತೆ ಭಾವಿಸಲಾಗಿದೆ. ಬಿಬಿಎಂಪಿಗೆ ನೂತನ ಆಯುಕ್ತರು ನೇಮಕವಾಗಿದ್ದು, ಅವರಾದರೂ ಮಳೆಯಿಂದಾ ಗುವ ಅನಾಹುತಗಳಿಗೆ ಕಡಿವಾಣ ಹಾಕಲು ಪ್ರಯತ್ನಿಸಬೇಕು. ರಾಜಕಾಲುವೆಗಳ ಒತ್ತುವರಿ, ಕೆರೆಗಳಲ್ಲಿ ಹೂಳು ತುಂಬಿರುವುದು ಮಾತ್ರವಲ್ಲದೆ, ತ್ಯಾಜ್ಯನೀರಿನ ನಿರ್ವಹಣೆಗೆ ಸಮರ್ಪಕ ಯೋಜನೆ ರೂಪಿಸದಿರುವುದು ಸಹ ನಗರದಲ್ಲಿ ಉಂಟಾಗುವ ಪ್ರವಾಹ ಪರಿಸ್ಥಿತಿಗೆ ಕಾರಣವಾಗಿದೆ.

ರಾಜಕಾಲುವೆಗಳ ಹೂಳೆತ್ತುವ ಹಾಗೂ ಅಗತ್ಯ ಇರುವ ಕಡೆ ರಾಜಕಾಲುವೆಗಳಿಗೆ ತಡೆಗೋಡೆಗಳನ್ನು ಎತ್ತರಿಸುವ ಮೂಲಕ ಪ್ರವಾಹ ಉಂಟಾಗುವ ಪ್ರದೇಶಗಳ ಸಂಖ್ಯೆಯನ್ನು ಕಡಿಮೆ ಮಾಡಲು ಬಿಬಿಎಂಪಿ ಮುಂದಾಗಬೇಕು. ಒಳ ರಸ್ತೆಗಳಲ್ಲಿ ಈಗಲೂ ಬಾಯ್ದೆರೆದುಕೊಂಡಿರುವ ಗುಂಡಿಗಳು ಮೃತ್ಯುಕೂಪಗಳಂತೆ ಕಾಣಿಸುತ್ತಿವೆ.

ಮಳೆ ಬಂದಾಗ ಚರಂಡಿ ಹೂಳೆತ್ತುವುದು, ಅಪಾಯಕಾರಿ ಮರಗಳ ಕೊಂಬೆ ಕತ್ತರಿಸುವುದು, ಮರ ಬಿದ್ದರೆ ತಕ್ಷಣ ಅದನ್ನು ತೆರವುಗೊಳಿಸುವುದಷ್ಟೇ ತನ್ನ ಜವಾಬ್ದಾರಿ ಎಂದು ಬಿಬಿಎಂಪಿ ಭಾವಿಸಿದಂತಿದೆ. ಬಿಬಿಎಂಪಿ ಅಽಕಾರಿಗಳು ನಡೆಸುವ ಮಳೆಗಾಲದ ಪೂರ್ವಸಿದ್ಧತೆ ಸಭೆಗಳಲ್ಲಿ ಈ ವಿಚಾರಗಳಷ್ಟೇ ಚರ್ಚೆಯಾಗುತ್ತಿವೆ.

ದಶಕದಿಂದ ಈಚೆಗೆ ಪ್ರತೀ ಮಳೆಗಾಲದಲ್ಲಿ ಪ್ರವಾಹಗಳು ಮರುಕಳಿಸಿದರೂ ಅವನ್ನು ಶಾಶ್ವತ ವಾಗಿ ತಡೆಯುವ ಸಮಗ್ರ ಕಾರ್ಯಯೋಜನೆ ಜರಿಗೊಳಿಸಲು ಸಾಧ್ಯವಾಗಿಲ್ಲ. ನೂತನ ಆಯುಕ್ತರು ಇನ್ನಾದರೂ ಪ್ರವಾಹ ತಡೆಯಲು ಆಗಬೇಕಾದ ಕಾಮಗಾರಿಗಳನ್ನು ಸಮರೋ ಪಾದಿಯಲ್ಲಿ ಪೂರ್ಣಗೊಳಿಸಬೇಕು. ಮುಂಗಾರು ಆರಂಭಕ್ಕೆ ಮೊದಲೇ ರಸ್ತೆಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕು. ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಕಲ್ಪಿಸಬೇಕು. ರಾಜಕಾಲುವೆಗಳು ೬೩೦ ಕಡೆ ಒತ್ತುವರಿ ಆಗಿವೆ ಎಂದು ಬಿಬಿಎಂಪಿ ಗುರುತಿಸಿದೆ. ಅವುಗಳನ್ನು ಮುಲಾಜಿಲ್ಲದೇ ತೆರವುಗೊಳಿಸಬೇಕು.

ಈಗಾಗಲೇ, ಒತ್ತುವರಿ ತೆರಿವಿಗೆ ತೀರ್ಮಾನಿಸಿರುವ ಕೆಲವು ಪ್ರದೇಶಗಳ ಮೇಲೆ ನ್ಯಾಯಾಲಯದ ನಿಬಂಧವಿದ್ದು, ಅದನ್ನು ತೆರವುಗೊಳಿಸಲು ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಪ್ರವಾಹ ಪರಿಸ್ಥಿತಿ, ರಸ್ತೆಗುಂಡಿಗಳಿಂದ ಸಾವು, ಮನೆಗಳ ಮುಳುಗುವಿಕೆಯಂತಹ ಸ್ಥಿತಿಯನ್ನು ನಿಭಾಯಿಸುವುದು ಬಿಬಿಎಂಪಿಗೆ ಕಷ್ಟಸಾಧ್ಯವಾಗಲಿದೆ. ಈಗಲಾದರೂ ಬಿಬಿಎಂಪಿ ಮತ್ತು ಸರಕಾರ ಈ ನಿಟ್ಟಿನಲ್ಲಿ ಯೋಚಿಸುವುದು ಸೂಕ್ತ.